ಸ್ವಾತಂತ್ರಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ: ಭೀಮಣ್ಣ ನಾಯ್ಕ
‘ಕ್ವ್ವಿಟ್ ಇಂಡಿಯಾ ಚಳವಳಿ’ಯ 75ನೆ ವರ್ಷಾಚರಣೆಯ ಕಾರ್ಯಕ್ರಮ

ಹೊನ್ನಾವರ, ಆ.11: ಸ್ವಾತಂತ್ರಕ್ಕಾಗಿ ದುಡಿದಂತಹ ನಮ್ಮ ದೇಶದ ಅನೇಕ ಮಹಾನುಭಾವರನ್ನು ನೆನೆಸಿಕೊಂಡಾಗ ಸ್ವಾತಂತ್ರಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆ ಅಪಾರ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು. ಪಟ್ಟಣದ ಪ್ರಭಾತನಗರದ ಮೂಡುಗಣಪತಿ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಹೊನ್ನಾವರ ಮತ್ತು ಮಂಕಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ‘ಕ್ವ್ವಿಟ್ ಇಂಡಿಯಾ ಚಳವಳಿ’ಯ 75ನೆ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿಂದೆ ಸ್ವಾತಂತ್ರಕ್ಕಾಗಿ ದುಡಿದ ಮಹಾತ್ಮರ ಭಾವಚಿತ್ರಗಳನ್ನು ಕಂಡಾಗ ಅವರೆಲ್ಲರೂ ಕಾಂಗ್ರೆಸಿನ ನಾಯಕರಾಗಿದ್ದರು ಎಂಬುದು ನಮಗೆ ಹೆಮ್ಮೆ ಎನಿಸುತ್ತದೆ. ಅವರಿಂದಾಗಿ ಇಂದು ನಾವು ಎಲ್ಲ ರೀತಿಯ ಸ್ವಾತಂತ್ರವನ್ನು ಅನುಭವಿಸಿಕೊಂಡು ಅಭಿವೃದ್ಧಿಯನ್ನು ಹೊಂದಿದ್ದೇವೆ. ಇದನ್ನು ಅರಿತ ಪಕ್ಷದ ಕಾರ್ಯಕರ್ತರಾದ ನಾವು ದೇಶಕ್ಕಾಗಿ ಏನು ಸೇವೆ ಸಲ್ಲಿಸಬೇಕೆಂದು ಚಿಂತಿಸಬೇಕಾಗಿದೆ ಎಂದರು. ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಕ ಜಿಪಂನ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಆ.1942ರಲ್ಲಿ ಮುಂಬೈನಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿವೇಶನದಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಆಂದೋಲನವನ್ನು ರೂಪಿಸಲಾಯಿತು. ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಕ್ವಿಟ್ ಇಂಡಿಯಾ ಆಂದೋಲನದ ಅಂಗವಾಗಿ ಮಾಡಿದ ಭಾಷಣದಲ್ಲಿ ಮಾಡು ಇಲ್ಲವೇ ಮಡಿ ಘೋಷ ವಾಕ್ಯವನ್ನು ಮೊಳಗಿಸಿದರು. ಬ್ರಿಟಿಷರ ಆಡಳಿತ ಕೊನೆಗೊಳ್ಳಬೇಕೆಂದು ಆಗ್ರಹಿಸಿ ಸಾಮೂಹಿಕ ಅಸಹಕಾರ ಆಂದೋಲನ ನಡೆಸಬೇಕೆಂದು ತೀರ್ಮಾನಿಸಲಾಯಿತು ಇದನ್ನು ಆಗಸ್ಟ್ ಕ್ರಾಂತಿ ಎಂದು ಬಣ್ಣಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಅಣ್ಣಯ್ಯ ನಾಯ್ಕ, ಪಪಂ ಅಧ್ಯಕ್ಷೆ ಜೋಸ್ಪಿನ್ ಡಯಾಸ್, ಉಪಾಧ್ಯಕ್ಷೆ ಮಹಾಲಕ್ಷ್ಮೀ ಹರಿಜನ, ಜಿಪಂ ಸದಸ್ಯೆ ಪುಷ್ಪಾ ನಾಯ್ಕ, ಕೆಪಿಸಿಸಿ ಸದಸ್ಯ ವಿನೋದ ನಾಯ್ಕ, ಜಿಲ್ಲಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಜಗದೀಪ್ ತೆಂಗೇರಿ, ಕಾಂಗ್ರೆಸ್‌ನ ಹಿರಿಯ ಮುಖಂಡ ಎಸ್.ಕೆ.ಭಾಗ್ವತ್ ಶಿರಸಿ, ಕೃಷ್ಣ ಗೌಡ ಮಾವಿನಕುರ್ವಾ, ಹಿರಿಯ ಮುಖಂಡ ರಾಮನಾಥ ನಾಯ್ಕ ಕರ್ಕಿ ಮತ್ತಿತರರು ಉಪಸ್ಥಿತರಿದ್ದರು. ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ ವಂದಿಸಿದರು. ಕಾಂಗ್ರೆಸ್ ಮುಖಂಡ ಬಾಲಚಂದ್ರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.







