ಸುರಕ್ಷಿತ ಮಾತೃತ್ವ ಅಭಿಯಾನಕ್ಕೆ ಚಾಲನೆ

ಕುಶಾಲನಗರ, ಆ.11: ತಾಯ್ತನ ಪ್ರತಿ ಹೆಣ್ಣಿಗೂ ಅಮೂಲ್ಯವಾದುದು, ಆದ್ದರಿಂದ ತಾಯಿಯಂದಿರು ಪ್ರಥಮವಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ಮಕ್ಕಳ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ಎಂ.ಎಂ.ಚರಣ್‌ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ ಹಾಗೂ ತಾಲೂಕು ಆರೋಗ್ಯ ಇಲಾಖೆ ಸೋಮವಾರಪೇಟೆ ಇದರ ವತಿಯಿಂದ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರ ಸಭಾಂಗಣದಲ್ಲಿ ನಡೆಸಲಾದ ಪ್ರಧಾನಮಂತ್ರಿಯವರ ವಿನೂತನ ಯೋಜನೆ ‘ಸುರಕ್ಷಿತ ಮಾತೃತ್ವ ಅಭಿಯಾನ’ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ವರು ಮಾತನಾಡಿದರು.
ಪ್ರಧಾನಮಂತ್ರಿಯವರ ಚಿಂತನೆಯಂತೆ ಸುರಕ್ಷಿತ ಮಾತೃತ್ವ ಅಭಿಯಾನ ಪ್ರತೀ ತಿಂಗಳು 9ನೆ ತಾರೀಕಿನಂದು ಜಾರಿಗೆ ಬಂದಿರುವುದರಿಂದ ತಾಯಂದಿರು ಈ ಪ್ರಯೋಜನಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಪಾರ್ವತಿ ಮಾತನಾಡಿ, ಗಂಡಾಂತರ ಮಹಿಳೆಯರೆಂದರೇನು? ಇವರಿಗಾಗುವ ತೊಂದರೆಗಳೇನು ಎಂಬುದನ್ನು ವಿವರಿಸಿದರು. ಅಲ್ಲದೇ ಮಹಿಳೆಯರಿಗೆ ಗರ್ಭಾವಸ್ಥೆಗೆ ಮೊದಲು ಹಾಗೂ ನಂತರದ ದಿನಗಳಲ್ಲಿ ಕಾಡಬಹುದಾದ ರಕ್ತಹೀನತೆ, ಅಪೌಷ್ಟಿಕತೆ ಮತ್ತು ರಕ್ತದೊತ್ತಡ ಹೀಗೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಇಂತಹ ಗುಂಪಿನ ಮಹಿಳೆಯರನ್ನು ಗಂಡಾಂತರ ಮಹಿಳೆಯರೆಂದು ಗುರುತಿಸಿ ಅವರಿಗೆ ಎಂಸಿಪಿ ಕಾರ್ಡ್ ವಿತರಿಸಲಾಗುತ್ತದೆ ಹಾಗೆ ಚಿಕಿತ್ಸೆ ಕೊಡಿಸಲಾಗುತ್ತದೆಂದು ಈ ಸಂದರ್ಭದಲ್ಲಿ ತಾಯಂದಿರಿಗೆ ಮನವರಿಕೆ ಮಾಡಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಭರತ್ ಮತ್ತು ಚೇತನ್, ತಾಲೂಕು ಆರೋಗ್ಯ ಮೇಲ್ವಿಚಾರಕಿ ದಮಯಂತಿ, ಹಿರಿಯ ಆರೋಗ್ಯ ಸಹಾಯಕಿ ಸುಶೀಲಾ ಉಪಸ್ಥಿತರಿದ್ದರು. ಸುಮಾರು 50ಕ್ಕೂ ಹೆಚ್ಚು ಗರ್ಭಿಣಿಯರು ಈ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.







