ಗುತ್ತಿಗೆ ಪೌರ ಕಾರ್ಮಿಕರ ವೇತನ ಹೆಚ್ಚಳ ನಿರ್ಣಯ
ಸಿದ್ದರಾಮಯ್ಯರವರ ಕ್ರಾಂತಿಕಾರಕ ಹೆಜ್ಜೆ: ಶ್ರೀನಿವಾಸ್

ಸಾಗರ, ಆ.11: ರಾಜ್ಯದ ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆಗಳಲ್ಲ್ಲಿ ಕೆಲಸ ಮಾಡುತ್ತಿರುವ 36 ಸಾವಿರ ಗುತ್ತಿಗೆ ಪೌರ ಕಾರ್ಮಿಕರ ವೇತನವನ್ನು ಹೆಚ್ಚಿಸುವ ಮಹತ್ವದ ನಿರ್ಣಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೊಂಡಿರುವುದು ಕ್ರಾಂತಿಕಾರಕ ಹೆಜ್ಜೆಯಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಪೌರ ಕಾರ್ಮಿಕರ ಖಾಯಮಾತಿಗೆ ಕೆಲವು ತೊಡಕುಗಳು ಇರುವುದರಿಂದ ಅವರಿಗೆ ವೇತನ ಹೆಚ್ಚಳದ ಜೊತೆಗೆ ರಿಸ್ಕ್ ಅಲೋಯೆನ್ಸ್ ರೂಪದಲ್ಲಿ 3 ಸಾವಿರ ರೂ. ನೀಡಲು ಆದೇಶ ಹೊರಡಿಸಲಾಗಿದೆ ಎಂದರು. ಗುತ್ತಿಗೆ ಪೌರ ಕಾರ್ಮಿಕರಿಗೆ ಇಷ್ಟು ದಿನದವರೆಗೆ 6,800 ರೂ. ವೇತನ ಸಿಗುತ್ತಿದ್ದು, ಮುಂದಿನ ತಿಂಗಳಿನಿಂದ ವೇತನವು ರೂ. 13,650 ದೊರೆಯಲಿದೆ. ಜೊತೆಗೆ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಂಪ್ಯೂಟರ್ ಆಪರೇಟರ್, ವಾಚ್‌ಮ್ಯಾನ್, ಡ್ರೈವರ್ ಸೇರಿದಂತೆ ಇತರರಿಗೂ ಈ ಯೋಜನೆಯ ಲಾಭ ಸಿಗಲಿದೆ. ಇದರ ಜೊತೆಗೆ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನವನ್ನು ಸರಕಾರ ಕೈಗೊಂಡಿದೆ ಎಂದರು. ನಗರಸಭೆ ಅಧ್ಯಕ್ಷ ಆರ್.ಗಣಾಧೀಶ್ ಮಾತನಾಡಿದರು. ಗೋಷ್ಠಿಯಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ, ನಗರ ಬ್ಲಾಕ್ ಅಧ್ಯಕ್ಷ ಮಕ್ಬೂಲ್ ಅಹ್ಮದ್, ಪ್ರಧಾನ ಕಾರ್ಯದರ್ಶಿಗಳಾದ ಮಹಾಬಲ ಕೌತಿ, ಡಿ.ದಿನೇಶ್, ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಖಾಸಿಂ ಮತ್ತಿತರರಿದ್ದರು.





