ಬಿಜೆಪಿ ಶಾಸಕರು ನಕಲಿ ಗೋರಕ್ಷಕರ ಪಟ್ಟಿಮಾಡಿ ಪೊಲೀಸ್ ಇಲಾಖೆಗೆ ಕೊಡಲಿ: ಸಂದೀಪ್
ಜಿಲ್ಲೆಯಲ್ಲಿ ಶಾಂತಿ ಸೌಹಾರ್ದಕ್ಕೆ ಮುಂದಾಗಲು ಮನವಿ
.jpg)
ಚಿಕ್ಕಮಗಳೂರು, ಆ.11: ಜಿಲ್ಲಾ ಬಿಜೆಪಿ ಶಾಸಕರು ನಕಲಿ ಗೋರಕ್ಷಕರ ಪಟ್ಟಿ ಮಾಡಿ ಪೊಲೀಸ್ ಇಲಾಖೆಗೆ ನೀಡಿದರೆ ಜಿಲ್ಲೆಯಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಸಂದೀಪ್ ತಿಳಿಸಿದ್ದಾರೆ.
ಗೋರಕ್ಷಣೆ ಹೆಸರಿನಲ್ಲಿ ರಾಜ್ಯದಲ್ಲಿ ಅಮಾಯಕರ ಮೇಲೆ ನಿರಂತರವಾಗಿ ಹಲ್ಲೆ ಪ್ರಕರಣಗಳು ನಡೆಯುತ್ತಿವೆ. ಇದನ್ನು ನಿಯಂತ್ರಿಸಲು ಸ್ಥಳೀಯ ಬಿಜೆಪಿ ಪ್ರಭಾವಿ ಶಾಸಕರಾದ ಸಿ.ಟಿ.ರವಿ ಮತ್ತು ಡಿ.ಎನ್.ಜೀವರಾಜ್‌ರವರು ನೇತೃತ್ವ ವಹಿಸಿ ನಕಲಿ ಗೋರಕ್ಷಕರ ಪಟ್ಟಿ ಮಾಡಿದರೆ ಜಿಲ್ಲೆಯಲ್ಲಿ ಶಾಂತಿ ನೆಲೆಸುವಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು.
ಈಗಾಗಲೇ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಕಲಿ ಗೋರಕ್ಷಕರು ಎಂಬ ಪದಬಳಕೆ ಮಾಡಿರುವುದು ಸ್ವಾಗತಾರ್ಹವಾದುದು ಈಗಲಾದರೂ ಹಿಂದುತ್ವ ಮತ್ತು ಗೋರಕ್ಷಣೆ ಹೆಸರಿನಲ್ಲಿ ನಕಲಿಗಳು ಸೃಷ್ಟಿಯಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿವುದು ದೇಶಕ್ಕೆ ಉತ್ತಮ ಸಂದೇಶವಾಗಿದೆ.
ಜಿಲ್ಲೆಯ ಶಾಂತಿ ಸೌಹಾರ್ದತೆ ಕಾಪಾಡಲು ಮುಂದಾಗುವಂತೆ ಸಲಹೆ ನೀಡಿ, ಹಿಂದುತ್ವ ಹಾಗೂ ಗೋರಕ್ಷಣೆ ಹೆಸರಿನಲ್ಲಿ ಅಮಾಯಕ ಜನರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಪಟ್ಟಿಯನ್ನು ನೀಡುವಂತೆ ಹೇಳಿದರು. ಎಂ.ಜಿ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರೂ. ದುರ್ಬಳಕೆಯಾಗಿರುವುದರ ಹಿಂದೆ ಶಾಸಕರ ಕೈವಾಡವಿದೆ ಎಂಬ ನೇರವಾದ ಜನರ ಆರೋಪಕ್ಕೆ ಉತ್ತರ ನೀಡಬೇಕು. ಹಿಂದೆ ಎಂ.ಜಿ. ರಸ್ತೆ ಅಗಲೀಕರಣಕ್ಕೆ ಹಾಗೂ ಆಝಾದ್ ಪಾರ್ಕ್ ವೃತ್ತದ ಅರಳೀಮರ ತೆರವಿಗೆ ಅಡ್ಡಿಪಡಿಸಿದ್ದ ಶಾಸಕ ಸಿ.ಟಿ.ರವಿಯವರಿಗೆ ಈಗ ಊರಿನ ಅಭಿವೃದ್ಧಿ ಬಗ್ಗೆ ಇಷ್ಟೊಂದು ಕಾಳಜಿ ಬಂದಿದೆ ಎಂದರೆ ಇದರ ಹಿಂದಿನ ಮರ್ಮವನ್ನು ಬಹಿರಂಗಪಡಿಸುವ ಕಾಲ ಸನ್ನಿಹಿತವಾಗಿದೆ. ಜಿಲ್ಲೆಯ ಅಭಿವೃದ್ಧಿ ಹಾಗೂ ಜನರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಎಂಜಿ ರಸ್ತೆ ಹಾಗೂ ಮಾರ್ಕೆಟ್‌ರಸ್ತೆಯ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಶಾಸಕರು ಶಿಫಾರಸು ಮಾಡಿದರೆ ನಿಮ್ಮ ಮೇಲಿನ ಆರೋಪ ದೂರಾಗಲು ಒಂದಿಷ್ಟು ಸಹಕಾರಿಯಾಗಬಹುದು ಎಂದು ಸಂದೀಪ್ ಟೀಕಿಸಿದರು.







