‘ದೇವರಾಜ ಅರಸು ಬದುಕು ಇಂದಿನ ರಾಜಕಾರಣಿಗಳಿಗೆ ಮಾರ್ಗದರ್ಶನವಾಗಲಿ’
.jpg)
ಸಾಗರ, ಆ.11: ದೇಶ ಕಂಡ ಮಹಾನ್ ವ್ಯಕ್ತಿಗಳಲ್ಲಿ ದೇವರಾಜ ಅರಸು ಒಬ್ಬರು. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳು ಸರ್ವಕಾಲಕ್ಕೂ ಸಲ್ಲುವಂತಹದ್ದಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಕಾಗೋಡು ಅಣ್ಣಪ್ಪ ಹೇಳಿದರು. ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಬುಧವಾರ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ದಿ. ದೇವರಾಜ ಅರಸು ಜನ್ಮ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಾಮಾಜಿಕ ನ್ಯಾಯದ ಹರಿಕಾರರೆಂದೆ ಕರೆಯುವ ದೇವರಾಜ ಅರಸು ಅವರು ಜಾರಿಗೆ ತಂದ ಭೂಸುಧಾರಣೆ ಕಾನೂನಿನಿಂದ ಅನೇಕ ರೈತ ಕುಟುಂಬಗಳು ನೆಮ್ಮದಿಯ ಜೀವನ ನಡೆಸುವಂತೆ ಆಗಿದೆ. ಅರಸು ಅವರ ಬದುಕು ಇಂದಿನ ಯುವ ರಾಜಕಾರಣಿಗಳಿಗೆ ಮಾರ್ಗದರ್ಶನವಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅರಸು ಅವರು, ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ಮಲ ಹೋರುವ ಪದ್ಧ್ದತಿ ನಿಷೇಧ, ಭೂಹೀನರಿಗೆ ಭೂಮಿ, ದುಡಿಯುವ ಕೈಗಳಿಗೆ ಕೆಲಸ ನೀಡುವ ಮೂಲಕ ಬಡತನ ನಿವಾರಣೆಯಂತಹ ಯಶಸ್ವಿ ಕೆಲಸಗಳನ್ನು ಮುಖ್ಯಮಂತ್ರಿಗಳಾಗಿದ್ದಾಗ ಜಾರಿಗೆ ತಂದಿದ್ದರು ಎಂದರು. ಜಿಪಂ ಸದಸ್ಯರಾದ ಆರ್.ಸಿ.ಮಂಜುನಾಥ್, ರಾಜಶೇಖರ ಗಾಳಿಪುರ, ತಾಪಂ ಸದಸ್ಯ ಕಲಸೆ ಚಂದ್ರಪ್ಪ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಗಣಪತಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ವೆಂಕಟರಮಣ ರೆಡ್ಡಿ, ತಹಶೀಲ್ದಾರ್ ಎನ್.ಟಿ.ಧರ್ಮೋಜಿರಾವ್ ಮತ್ತಿತರರು ಉಪಸ್ಥಿತರಿದ್ದರು.





