ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಸಿಒಡಿ ತನಿಖೆಗೆ ಗೃಹ ಸಚಿವರಿಗೆ ಸಚಿವ ಪ್ರಮೋದ್ ಮನವಿ
ಉಡುಪಿ, ಆ.11: ಕಳೆದ ಜು.28 ರಂದು ನಡೆದ ಭಾಸ್ಕರ್ ಶೆಟ್ಟಿ ನಿಗೂಢ ನಾಪತ್ತೆ ಪ್ರಕರಣದ ತನಿಖೆಯ ಕುರಿತಂತೆ ಶೆಟ್ಟಿ ಅವರ ಕುಟುಂಬಸ್ಥರು ಹಾಗೂ ಸಾರ್ವಜನಿಕರು ವ್ಯಕ್ತಪಡಿಸಿರುವ ಸಂಶಯ ಹಾಗೂ ಬೇಡಿಕೆಯ ಹಿನ್ನೆಲೆಯಲ್ಲಿ ಇಡೀ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಭಾಸ್ಕರ ಶೆಟ್ಟಿ ಅವರ ಕುಟುಂಬಸ್ಥರು ಹಾಗೂ ಉಡುಪಿ ಜಿಲ್ಲಾ ಸಮಸ್ತ ಬಂಟ ಸಮುದಾಯದ ಸದಸ್ಯರು ತನಿಖಾಧಿಕಾರಿಯನ್ನು ಬದಲಾಯಿಸಿ ತನಿಖೆಯನ್ನು ಚುರುಕುಗೊಳಿಸಬೇಕು ಹಾಗೂ ಈ ಬಗ್ಗೆ ಸಿಒಡಿ ತನಿಖೆ ನಡೆಸಬೇಕೆಂಬ ಬೇಡಿಕೆಗೆ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ರಾದ ಪ್ರಮೋದ್ ಮಧ್ವರಾಜ್ ಸ್ಪಂಧಿಸಿದ್ದಾರೆ.
ಈ ಬಗ್ಗೆ ತಾಯಿ ಗುಲಾಬಿ ಶೆಡ್ತಿ ಅವರು ತನ್ನ ಪುತ್ರ ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಉಡುಪಿಯಲ್ಲಿಯೂ ಹಲವು ಉದ್ಯಮಗಳನ್ನು ನಡೆಸುತ್ತಿದ್ದ ಭಾಸ್ಕರ್ ಶೆಟ್ಟಿ ನಾಪತ್ತೆಯಾದ ಕುರಿತು ದೂರು ನೀಡಿದರೂ ಈ ಕುರಿತು ತನಿಖೆ ನಡೆಸಲು ವಿಳಂಬಗೊಳಿಸಿದ್ದು ಅನಂತರ ನಡೆದ ಪ್ರಕರಣಗಳು ಸಾರ್ವಜನಿಕ ವಲಯದಲ್ಲಿ ಸಂಶಯ ಮೂಡುವಂತ ಘಟನೆಗಳಾಗಿವೆ. ಈ ಕುರಿತು ತಾಯಿ ಗುಲಾಬಿ ಶೆಡ್ತಿಯವರು ತನಗೆ ಮನವಿ ಸಲ್ಲಿಸಿದ್ದು, ಸಿಒಡಿ ತನಿಖೆ ನಡೆಸಿ ಭಾಸ್ಕರ್ ಶೆಟ್ಟಿ ತಾಯಿ ಹಾಗೂ ಅವರ ಕುಟುಂಬಸ್ಥರಿಗೆ ನ್ಯಾಯ ಒದಗಿ ಸುವಂತೆ ಸಚಿವ ಪ್ರಮೋದ್ ಗೃಹ ಸಚಿವರ ಪತ್ರದಲ್ಲಿ ವಿನಂತಿಸಿದ್ದಾರೆ.







