ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಪಂ ಅಧ್ಯಕ್ಷೆ ಉಮಾ
ಅಕ್ರಮ ಮರಳುಗಾರಿಕೆ

ದಾವಣಗೆರೆ, ಆ.11: ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗೆ ಮರಳು ಸಿಗುತ್ತಿಲ್ಲ, ಮಳೆಗಾಲಕ್ಕೂ ಮುಂಚೆ ಕೆಲವರು ಮರಳು ಲೂಟಿ ಮಾಡುತ್ತಿದ್ದಾಗ ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದೀರಿ ಎಂದು ಜಿಪಂ ಅಧ್ಯಕ್ಷೆ ಉಮಾ ಎಂ.ಪಿ.ರಮೇಶ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗುರುವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅಧಿಕಾರಿಗಳ ವಿರುದ್ಧ ಗರಂ ಆದ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಬಡ ಮತ್ತು ಮಧ್ಯಮ ವರ್ಗದ ಜನರು ಮನೆ ಕಟ್ಟಿಕೊಳ್ಳಲು ಮರಳು ಸಿಗುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಲೋಕೋಪಯೋಗಿ ಇಲಾಖೆ ಅಭಿಯಂತರ ಚಂದ್ರವೌಳಿ, ಈಗ ಮಳೆಗಾಲ ಪ್ರಾರಂಭವಾಗಿರುವುದರಿಂದ ಮರಳು ನಿಕ್ಷೇಪಗಳಿಂದ ಮರಳು ತೆಗೆಯುತ್ತಿಲ್ಲ. ಹೀಗಾಗಿ, ಸ್ವಲ್ಪಸಮಸ್ಯೆಯಾಗಿದೆ ಎನ್ನುತ್ತಿದ್ದಂತೆ ಕೆರಳಿದ ಅಧ್ಯಕ್ಷೆ ಉಮಾ, ಈಗಂತೂ ಮಳೆಗಾಲ ಇದೆ ಸರಿ. ಆದರೆ, ಮಳೆಗಾಲಕ್ಕೂ ಮುಂಚೆ ಕೆಲ ಮರಳು ದಂಧೆಕೋರರು ಮರಳು ಲೂಟಿ ಮಾಡುತ್ತಿದ್ದಾಗ ನೀವೇನು ಮಾಡುತ್ತಿದ್ದೀರಿ? ಮರಳು ಅಲಭ್ಯವಾಗಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಡಿಡಿಪಿಐ ಎಚ್.ಎಂ. ಪ್ರೇಮಾ, ಜಿಲ್ಲೆಯಲ್ಲಿ ಒಟ್ಟು 627 ಜನ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಲಾಗಿತ್ತು. ಈ ಪೈಕಿ ಆಯಾ ತಾಲೂಕುಗಳ ವ್ಯಾಪ್ತಿಯಲ್ಲಿಯೇ 400 ಜನರನ್ನು ಸ್ಥಳಾಂತರಿಸಲಾಗಿದೆ. ಇನ್ನುಳಿದ 200 ಜನ ಶಿಕ್ಷಕರನ್ನು ಜಿಲ್ಲಾ ಮಟ್ಟದಲ್ಲಿ ಕೌನ್ಸ್ಸೆಲಿಂಗ್ ನಡೆಸಿ ಶಿಕ್ಷಕರ ಹೆಚ್ಚು ಕೊರತೆ ಇದ್ದ ಹರಪನಹಳ್ಳಿ ಮತ್ತು ಜಗಳೂರು ತಾಲೂಕುಗಳಿಗೆ ನಿಯೋಜಿಸಲಾಗಿದೆ. ಇದರಿಂದ ಶಿಕ್ಷಕರ ಕೊರತೆ ನಿವಾರಣೆಯಾದಂತಾಗಿದೆ. ಇನ್ನೂ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಹೊರ ಜಿಲ್ಲೆಯಿಂದ ನಮ್ಮ ಜಿಲ್ಲೆಗೆ ಬರುವ ಶಿಕ್ಷಕರಿಗೆ ಅವಕಾಶವಿಲ್ಲ. ನಮ್ಮ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಬೇಕಾದರೆ ಶಿಕ್ಷಕರು ವರ್ಗಾವಣೆ ಪಡೆಯಬಹುದು ಎಂದರು.
ಅಧ್ಯಕ್ಷೆ ಉಮಾ ಮಾತನಾಡಿ, ನಿಯಮ ಪ್ರಕಾರ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಆಗಿಲ್ಲ. ಹಣ ಪಡೆದು ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ ಎನ್ನುತ್ತಿದ್ದಂತೆ ಪ್ರತಿಕ್ರಿಯಿಸಿದ ಡಿಡಿಪಿಐ ಪ್ರೇಮಾ, ನಾವು ನಿಯಮ ಪ್ರಕಾರವೇ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಮಾಡಿದ್ದೇವೆ.ಸರಕಾರ ಹೊರಡಿಸಿದ್ದ 5 ಸುತ್ತೋಲೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯಂತೆ ಹೆಚ್ಚುವರಿ ಶಿಕ್ಷಕರನ್ನು ಸ್ಥಳಾಂತರಿಸಲಾಗಿದೆ. ಆದರೆ, ಈಗಾಗಲೇ ಹೊಲ ಮನೆ ಮಾಡಿಕೊಂಡು ಒಂದೇ ಕಡೆ ನೆಲೆಸಿರುವ ಶಿಕ್ಷಕರು ಇದಕ್ಕೆ ಪ್ರತಿರೋಧ ಒಡ್ಡಿ ನಿಮ್ಮ ಮೂಲಕ ಒತ್ತಡ ಹೇರಿ ಉಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಸಭೆೆಗೆ ಯಾವುದೇ ಮಾಹಿತಿ ನೀಡದೇ, ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸಿಇಒ ಆರ್. ಗಿರೀಶ್‌ಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಇಬ್ರಾಹೀಂ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ವಾಗೀಶ್, ನಿರ್ಥಡಿ ನಟರಾಜ್, ಜಿಪಂ ಸಿಇಒ ಆರ್. ಗಿರೀಶ್ ಮೈಗೂರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







