‘ಸೆಲ್ಫಿ’ ವ್ಯಾಮೋಹಕ್ಕೆ ಪ್ರವಾಸಿ ತಾಣಗಳಾಗುತ್ತಿವೆ ಡೆತ್‌ಪಾಯಿಂಟ್
ಕಡಿವಾಣಕ್ಕೆ ಪ್ರವಾಸೋದ್ಯಮ ಇಲಾಖೆಯ ಕ್ರಮ
ಶಿವಮೊಗ್ಗ, ಆ. 11: ಮೊಬೈಲ್ ಪೋನ್ ‘ಸೆಲ್ಫಿ’ ಫೋಟೊ ಗೀಳು ಹತ್ತು ಹಲವು ಅನಾಹುತಗಳಿಗೆ ಎಡೆ ಮಾಡಿಕೊಡುತ್ತಿವೆ. ಈಗಾಗಲೇ ‘ಸೆಲ್ಫಿ’ ಫೋಟೊ ತೆಗೆದುಕೊಳ್ಳುವ ವ್ಯಾಮೋಹದಿಂದ ಹಲವರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ವಿಶೇಷವಾಗಿ ಪ್ರವಾಸಿ ತಾಣಗಳ ಅಪಾಯಕಾರಿ ಸ್ಥಳಗಳಲ್ಲಿ ‘ಸೆಲ್ಫಿ’ ತೆಗೆದುಕೊಳ್ಳಲು ಮುಂದಾದ ಹಲವು ಪ್ರವಾಸಿಗರು ಸಾವು-ನೋವಿಗೆ ತುತ್ತಾಗಿದ್ದಾರೆ.
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ‘ಸೆಲ್ಫಿ’ ಅನಾಹುತಗಳಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆಗಳು ಪ್ರಮುಖ ಪ್ರವಾಸಿ ತಾಣಗಳ ಅಪಾಯಕಾರಿ ಸ್ಥಳಗಳಲ್ಲಿ ‘ಸೆಲ್ಫಿ’ ಫೋಟೊ ತೆಗೆದುಕೊಳ್ಳುವುದರ ಮೇಲೆ ನಿರ್ಬಂಧ ಹೇರಲು ಗಂಭೀರ ಚಿಂತನೆ ನಡೆಸುತ್ತಿದೆ. ಈ ನಡುವೆ ಮಲೆನಾಡ ತವರೂರು ಶಿವಮೊಗ್ಗ ಜಿಲ್ಲೆಯ ಹಲವು ಪ್ರಮುಖ ಪ್ರವಾಸಿ ತಾಣಗಳ ಅಪಾಯಕಾರಿ ಸ್ಥಳಗಳಲ್ಲಿ, ‘ಸೆಲ್ಫಿ’ ತೆಗೆದುಕೊಳ್ಳುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಅಪಾಯಕಾರಿ ಸ್ಥಳಗಳಿಗೆ ಪ್ರವಾಸಿಗರು ತೆರಳದಂತೆ ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಕುರಿತಂತೆ ಗುರುವಾರ ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಹನುಮನಾಯ್ಕಿ, ಜಿಲ್ಲೆಯ ಹಲವು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ‘ಸೆಲ್ಫಿ’ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. ವಿಶ್ವ ವಿಖ್ಯಾತ ಜೋಗ ಜಲಪಾತ, ಆಗುಂಬೆ, ತೀರ್ಥಹಳ್ಳಿಯ ಕುಂದಾದ್ರಿ ಬೆಟ್ಟ, ಬಿದನೂರು ಕೋಟೆ ಸೇರಿದಂತೆ ಹಲವು ಪ್ರವಾಸಿ ತಾಣಗಳ ಅಪಾಯಕಾರಿ ಪ್ರದೇಶಗಳಲ್ಲಿ ‘ಸೆಲ್ಫಿ’ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಶಿವಮೊಗ್ಗ ಭಾಗದಲ್ಲಿ ಈವರೆಗೆ ಯಾವುದೇ ಅನಾಹುತ ಸಂಭವಿಸಿಲ್ಲವಾದರೂ ಮುಂದಿನ ದಿನಗಳಲ್ಲಿ ಪ್ರವಾಸಿಗರು ಅಪಾಯಕ್ಕೆ ಸಿಲುಕುವ ಸಾಧ್ಯತೆಯಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳು ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರು ‘ಸೆಲ್ಫಿ’ ತೆಗೆದುಕೊಳ್ಳಲು ಸಾಧ್ಯವಾಗದಂತೆ ವ್ಯಾಪಕ ಮುನ್ನೆಚ್ಚರಿಕಾ ಕ್ರಮಗಳನ್ನು ಇಲಾಖೆಯ ವತಿಯಿಂದ ಕೈಗೊಳ್ಳಲಾಗುತ್ತಿದೆ. ಕುಂದಾದ್ರಿ ಬೆಟ್ಟದ ಅಪಾಯಕಾರಿ ಪ್ರದೇಶದ ಸುತ್ತಮುತ್ತ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ತಂತಿ ಬೇಲಿ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಇಲಾಖೆಯ ವತಿಯಿಂದ 13 ಸಂಚಾರ ಪೊಲೀಸರ ನಿಯೋಜನೆ ಮಾಡಲಾಗಿದೆ. ಇವರು ಪ್ರವಾಸಿಗರಿಗೆ ಅಪಾಯಕಾರಿ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಅಲ್ಲದೆ, ಆ ಸ್ಥಳಗಳಲ್ಲಿ ‘ಸೆಲ್ಫಿ’ ತೆಗೆಯದಂತೆ ಸಲಹೆ-ಸೂಚನೆ ನೀಡುವ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.





