ಸ್ಮಾರಕ ಭವನದ ಕಟ್ಟಡ ಕಾಮಗಾರಿ ನನೆಗುದಿಗೆ
ಪುನಾರಂಭಕ್ಕೆ ಡಿಸಿ ನಕುಲ್ ಸೂಚನೆ

ಅಂಕೋಲಾ, ಆ.11: ಇಲ್ಲಿಯ ಸ್ಮಾರಕ ಭವನದ ಕಟ್ಟಡವನ್ನು ಹೊಸ ವಿನ್ಯಾಸದಲ್ಲಿ ರೂಪಿಸುವ ಸಲುವಾಗಿ 2012 ರಲ್ಲಿ 1 ಕೋಟಿ ರೂ. ಮಂಜೂರಾಗಿರುವ ಕಟ್ಟಡ ಕಾಮಗಾರಿ ಈ ವರೆಗೂ ಆರಂಭ ಕಾಣದಿರುವ ಬಗ್ಗೆ ನೂತನ ಜಿಲ್ಲಾಧಿಕಾರಿ ಎಸ್.ಎನ್.ನಕುಲ್ ಅವರು ಬುಧವಾರ ಭೇಟಿ ನೀಡಿ ಸ್ಮಾರಕ ಭವನ ವೀಕ್ಷಿಸಿ, ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಲು ಪ್ರತ್ಯೇಕ ನೀಲನಕ್ಷೆ ತಯಾರಿಸಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದರು.
ಬಳಿಕ ವರದಿಗಾರರೊಂದಿಗೆ ಮಾತನಾಡಿದ ಅವರು, ಸ್ಮಾರಕ ಭವನದ ಅಲಂಕಾರಕ್ಕೆ ಆದ್ಯತೆ ನೀಡುವ ಬದಲು ಮೊದಲು ಕಟ್ಟಡವನ್ನು ಉಳಿಸಬೇಕಾಗಿದೆ. ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯವಾಗಿ ನಿರ್ಮಿಸಿರುವ ಕಟ್ಟಡದ ಕಿಟಕಿಗಳೆಲ್ಲ ಜೀರ್ಣಾವಸ್ಥೆಯಲ್ಲಿದೆ. ಒಂದು ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನವೀಕರಣ ಮಾಡಬೇಕಾಗಿದೆ ಎಂದರು. ಲೋಕೋಪಯೋಗಿ ಅಧಿಕಾರಿ ಶಿವರಾಮ ಗಾಂವಕರ ಮಾತನಾಡಿ, 1988 ರಲ್ಲಿ ಮಂಜೂರಾದ ಈ ಭವನ ನಿರ್ವಹಣೆ ಇಲ್ಲದೆ ಕಿಟಕಿಗಳು ಹಾಳಾಗಿ ಮಳೆ ನೀರು ಒಳ ಪ್ರವೇಶಿಸುತ್ತಿವೆ. ರಂಗಮಂದಿರ, ಅತಿಥಿಗೃಹ, ಗ್ರಂಥಾಲಯ ಕಟ್ಟಡಗಳು ಸೋರುತ್ತಿವೆ. 2015 ರಲ್ಲಿ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಕೆಲವೆಡೆ ವಾಟರ್ ಫ್ರೂಪ್, ಸುಣ್ಣಬಣ್ಣ, ವಿದ್ಯುತ್, ಧ್ವನಿವರ್ಧಕ ಸೇರಿದಂತೆ ಕೆಲವೊಂದು ಮೂಲ ಸೌಕರ್ಯ ಒದಗಿಸಲು ಹೆಚ್ಚಿನ ಅನುದಾನದ ಅಗತ್ಯವಿದೆ ಎಂದರು. ಪುರಸಭೆ ಅಧ್ಯಕ್ಷ ಭಾಸ್ಕರ ಕೇ. ನಾರ್ವೇಕರ್, ತಾ.ಪಂ. ಅಧ್ಯಕ್ಷೆ ಸುಜಾತ ಗಾಂವಕರ, ಜಿಪಂ ಮಾಜಿ ಅಧ್ಯಕ್ಷ ರಮಾನಂದ ಬಿ. ನಾಯಕ, ವಿ.ಜೆ. ನಾಯಕ, ಸಾಹಿತಿ ವಿಷ್ಣು ನಾಯ್ಕ, ಎಸ್.ಆರ್. ನಾರ್ವೇಕರ, ಪುರಸಭೆ ಸದಸ್ಯ ಸಂದೀಪ ಬಂಟ ಸೇರಿದಂತೆ ಹಲವರ ಜೊತೆ ಜಿಲ್ಲಾಧಿಕಾರಿ ರೂಪುರೇಶಗಳ ಬಗ್ಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಸನ್ನ, ಪ್ರೊಬೇಷನರಿ ಐಎಎಸ್ ಫೌಝಿಯಾ ತರನಂ, ಉಪವಿಭಾಗಾಧಿಕಾರಿ ರಮೇಶ ಕಳಸದ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಪ್ರಭಾರ ಅಧಿಕಾರಿ ಶಫಿ, ಸಾದುದ್ದೀನ್, ತಹಶೀಲ್ದಾರ್ ವಿ.ಜಿ. ಲಾಂಜೇಕರ, ತಾಪಂ ಕಾರ್ಯನಿರ್ವಹಣಾಧಿಕಾರಿ ವಿ.ಎಂ. ಮಹಾಲೆ, ಪುರಸಭೆ ಮುಖ್ಯಾಧಿಕಾರಿ ಜಿ.ಎನ್. ನಾಯ್ಕ, ಪಿಐ ಅರುಣ ಕುಮಾರ ಜಿ. ಕೋಳೂರ, ಕಂದಾಯ ನಿರೀಕ್ಷ ಸುರೇಶ ಹರಿಕಂತ್ರ, ಪ್ರಮುಖರಾದ ರಾಮಕೃಷ್ಣ ಗುಂದಿ, ಬ್ರಹ್ಮಾನಂದ ನಾಯಕ ಮತ್ತಿತರರು ಉಪಸ್ಥಿತರಿದ್ದರು.







