ಕಡತಗಳ ವಿಲೇವಾರಿಗೆ ಅಧಿಕಾರಿಗಳ ನಿರ್ಲಕ್ಷ ಆರೋಪ:ಉಸ್ತುವಾರಿಯಿಂದ ಶೀಘ್ರ ಕ್ರಮದ ಭರವಸೆ
ವಾರ್ತಾಭಾರತಿ ಫಲಶ್ರುತಿ
ಮಡಿಕೇರಿ, ಆ.11: ನಗರಕ್ಕೆ ಶೀಘ್ರ ಭೇಟಿ ನೀಡಿ ತಹಶೀಲ್ದಾರ್ ಕಚೇರಿಯ ಅವ್ಯವಸ್ಥೆಗಳನ್ನು ಸರಿಪಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ಭರವಸೆ ನೀಡಿದ್ದಾರೆ.
ಮಡಿಕೇರಿ ತಹಶೀಲ್ದಾರ್ ಕಚೇರಿಯ ಕರ್ಮಕಾಂಡದ ಕುರಿತು ಆ. 10 ರಂದು ಪತ್ರಿಕೆ ವರದಿ ಮಾಡಿ ಆಡಳಿತ ವ್ಯವಸ್ಥೆಯ ಗಮನ ಸೆಳೆದಿತ್ತು. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರ ದೂರವಾಣಿ ಸಂಖ್ಯೆಯನ್ನು ಪ್ರಕಟಿಸಿ ಸಾರ್ವಜನಿಕರು ಸಮಸ್ಯೆಯನ್ನು ಹೇಳಿಕೊಳ್ಳಬಹುದೆಂದು ತಿಳಿಸಲಾಗಿತ್ತು.
ಪತ್ರಿಕೆಯ ವರದಿಯಾಧಾರದಲ್ಲಿ ಕೆಲವು ಅರ್ಜಿದಾರರು ಮೊಬೈಲ್ ಮೂಲಕ ಸಚಿವರನ್ನು ಸಂಪರ್ಕಿಸಿ ಅರ್ಜಿ ವಿಲೇವಾರಿಯಾಗದೆ ಇರುವ ಬಗ್ಗೆ ದೂರಿಕೊಂಡಿದ್ದರು. ಈ ಸಂಬಂಧ ಕಳೆದ ಬಾರಿ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ್ದ ವೇಳೆ ಭೂ ಸಂಬಂಧಿತ ಕಡತ ವಿಲೇವಾರಿಯಾಗದೆ ಇರುವ ಕುರಿತು ದೂರವಾಣಿ ಮೂಲಕ ವಿಚಾರಿಸಿದ್ದು, ಪತ್ರಿಕೆಯ ವರದಿಯನ್ನು ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡಿದ್ದರು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಹಲವು ವರ್ಷಗಳಿಂದ ಕಡತ ವಿಲೇವಾರಿಯಾಗದೆ ಇರುವ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ ಅವರು, ಆ.16 ರಂದು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಮತ್ತೊಮ್ಮೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡು ಬಾಕಿ ಇರುವ ಕಡತಗಳ ವಿಲೇವಾರಿಗೆ ಶೀಘ್ರ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ.





