ಆತ್ಮಹತ್ಯೆಗೈದ ಪುಲ್ ಬರೆದಿದ್ದ ನಾಲ್ಕು ಕಿರುಹೊತ್ತಿಗೆಗಳು ಪತ್ತೆ
ಇಟಾನಗರ, ಆ.11: ಮಂಗಳ ವಾರ ಆತ್ಮಹತ್ಯೆಗೆ ಶರಣಾಗಿದ್ದ ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಾಲಿಖೊ ಪುಲ್ ಅವರು ಬರೆದಿದ್ದರೆನ್ನಲಾದ ನಾಲ್ಕು ಕಿರುಹೊತ್ತಿಗೆಗಳು ಅವರ ಕೋಣೆಯಲ್ಲಿ ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ನಾವು ಅವುಗಳನ್ನು ಓದಿಲ್ಲ,ಹೀಗಾಗಿ ಅವನ್ನು ಆತ್ಮಹತ್ಯಾ ಪತ್ರ ಎಂದು ಪರಿಗಣಿಸುವಂತಿಲ್ಲ. ಈ ಹಿಂದೆ ವರದಿಯಾಗಿರುವಂತೆ ಪುಲ್ ಕೋಣೆಯಲ್ಲಿ ಯಾವುದೇ ಡೈರಿ ಪತ್ತೆಯಾಗಿಲ್ಲ. ಪೊಲೀಸರು ಈಗಾಗಲೇ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಟಾಲೊ ಪಾಟಮ್ ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪುಲ್ ಅವರ ಸಹಿಗಳನ್ನು ಹೊಂದಿವೆಯೆನ್ನಲಾದ ‘ಮೇರೆ ವಿಚಾರ್(ನನ್ನ ಚಿಂತನೆಗಳು)’ ಶೀರ್ಷಿಕೆಯ 60 ಪುಟಗಳ ನಾಲ್ಕು ಕಿರುಹೊತ್ತಿಗೆಗಳು ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಕೋಣೆಯಲ್ಲಿ ಪತ್ತೆಯಾಗಿವೆ ಎಂದು ಅವರು ಹೇಳಿದರು. ನಾಲ್ಕು ಮೊಬೈಲ್ ಫೋನ್‌ಗಳು ಮತ್ತು ಒಂದು ಟ್ಯಾಬ್ಲೆಟ್ ಕೂಡ ಪತ್ತೆಯಾಗಿದ್ದು, ಅವುಗಳನ್ನೂ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದರು.





