ದೇಶಾದ್ಯಂತ ನ್ಯಾಯಾಲಯಗಳಲ್ಲಿ 2.18 ಕೋಟಿ ಪ್ರಕರಣಗಳು ಬಾಕಿ
ಹೊಸದಿಲ್ಲಿ, ಆ.11: ಅಗತ್ಯ ಸಂಖ್ಯೆಯ ನ್ಯಾಯಾಧೀಶರು ಇಲ್ಲದಿರುವುದರಿಂದ ಹಿಡಿದು ಮೂಲಸೌಕರ್ಯ ಕೊರತೆ ವರೆಗಿನ ಹಲವು ಕಾರಣಗಳಿರಬಹುದು. ಆದರೆ ದೇಶದಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಎಷ್ಟು ಗೊತ್ತೇ? ಬರೋಬ್ಬರಿ 2.18 ಕೋಟಿ!
ಸುಪ್ರೀಂ ಕೋರ್ಟ್ ಈ ಅಂಕಿ ಅಂಶ ಪ್ರಕಟಿಸಿದ್ದು, 2.08 ಕೋಟಿ ಪ್ರಕರಣಗಳ ಪೈಕಿ ಶೇ.27 ಅಂದರೆ 59.3 ಲಕ್ಷ ಪ್ರಕರಣಗಳು ಐದು ವರ್ಷಕ್ಕಿಂತಲೂ ದೀರ್ಘಕಾಲದಿಂದ ಬಾಕಿ ಇವೆ. ಅದರಲ್ಲಿ ಸುಮಾರು ಅರ್ಧದಷ್ಟು ಅಂದರೆ 22.3 ಲಕ್ಷ ಪ್ರಕರಣಗಳು ದಶಕದಿಂದ ಕೊಳೆಯುತ್ತಿವೆ ಎಂದು ಇ-ಸಮಿತಿ ಅಂಕಿ ಅಂಶಗಳು ಹೇಳಿವೆ.
ಹಳೆ ಪ್ರಕರಣಗಳು ವಿಲೇವಾರಿಯಾಗುವ ರಾಷ್ಟ್ರೀಯ ಸರಾಸರಿ ಪ್ರಮಾಣ ಕುಸಿದಿದೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ. ರಾಷ್ಟ್ರೀಯ ನ್ಯಾಯಾಂಗ ಮಾಹಿತಿ ಗ್ರಿಡ್ ಅಂಕಿ ಅಂಶದ ಪ್ರಕಾರ, ಏಪ್ರಿಲ್ 30ಕ್ಕೆ 27.4 ಲಕ್ಷ ದೀರ್ಘಕಾಲದ ಪ್ರಕರಣಗಳು ವಿವಿಧ ಕೋರ್ಟ್ಗಳಲ್ಲಿ ಬಾಕಿ ಇದ್ದರೆ, ಮೇ 31ಕ್ಕೆ ಇದು 28.8 ಲಕ್ಷ ಆಗಿದೆ.
ಹತ್ತು ವರ್ಷಕ್ಕಿಂತ ಅಧಿಕ ಕಾಲದಿಂದ ಬಾಕಿ ಇರುವ ಪ್ರಕರಣಗಳಲ್ಲಿ ಸಿಂಹಪಾಲು ಉತ್ತರಪ್ರದೇಶದ್ದು. ರಾಜ್ಯದ 6.6 ಲಕ್ಷ ಪ್ರಕರಣಗಳು ದಶಕದಷ್ಟು ಹಳೆಯವು. ಗುಜರಾತ್ನ 5,2 ಲಕ್ಷ, ಮಹಾರಾಷ್ಟ್ರದ 2.51 ಲಕ್ಷ, ಬಿಹಾರದ 2.3 ಲಕ್ಷ, ಒಡಿಶಾದ 1.83 ಲಕ್ಷ ಹಾಗೂ ಪಶ್ಚಿಮ ಬಂಗಾಳದ 1.51 ಲಕ್ಷ ಪ್ರಕರಣಗಳು ಹತ್ತು ವರ್ಷದಿಂದ ಬಾಕಿ ಇವೆ. ಪಂಜಾಬ್ನಲ್ಲಿ ಅತಿ ಕಡಿಮೆ ಎಂದರೆ ಕೇವಲ 1,328 ಪ್ರಕರಣಗಳು ಮಾತ್ರ 10 ವರ್ಷಕ್ಕಿಂತ ಹಳೆಯವು.
ಬಾಕಿ ಪ್ರಕರಣಗಳಲ್ಲಿ ಹಿರಿಯ ನಾಗರಿಕರು ಸಲ್ಲಿಸಿದ 71 ಲಕ್ಷ ಹಾಗೂ ಮಹಿಳೆಯರು ಸಲ್ಲಿಸಿದ 21.4 ಲಕ್ಷ ಪ್ರಕರಣಗಳೂ ಸೇರಿವೆ.