ಜಿಲ್ಲಾ ಪಂಚಾಯತ್ ಅಧ್ಯಕ್ಷರ ಆದೇಶ ಪಾಲಿಸದ ಅಧಿಕಾರಿಗಳು: ಖಂಡನೆ
ಮಂಗಳೂರು,ಆ.11:ರಾಜ್ಯ ಸರಕಾರ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯ ಬಗ್ಗೆ ಹೊರಡಿಸಿರುವ ಆದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲಿಯುತ್ತಿರುವ ಸರಕಾರಿ ಶಾಲೆಯ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಶಾಲೆಯಲ್ಲಿ ಶಿಕ್ಷಕರ ಕೊರತೆ ಇನ್ನಷ್ಟು ಹೆಚ್ಚಾಗುವ ಕಾರಣದಿಂದ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಶಿಕ್ಷಕರ ವರ್ಗಾವಣೆಯ ಕೌನ್ಸಿಲಿಂಗ್‌ನ್ನು ಮುಂದೂಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಆದೇಶ ನೀಡಿದ್ದರೂ ದಕ್ಷಿಣ ಕನ್ನಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಗುರುವಾರ ಶಿಕ್ಷಕರ ಕೌನ್ಸಿಲಿಂಗ್ ನಡೆಸಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರ ಆದೇಶವನ್ನು ಪಾಲಿಸದೆ ಇರುವ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳ ವರ್ತನೆ ಖಂಡನೀಯ, ಮಕ್ಕಳ ಹಕ್ಕು ಉಲ್ಲಂಘಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶೈಕ್ಷಣಿಕ ಹಕ್ಕುಗಳ ಬಗೆಗಿನ ಸಮಾನ ಮನಸ್ಕರ ಹೋರಾಟ ಸಮಿತಿಯ ಮುಖಂಡ ಲೋಲಾಕ್ಷ ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.
ಸರಕಾರಿ ಅಧಿಕಾರಿಗಳ ವರ್ಗಾವಣೆಯನ್ನು ನಾವು ವಿರೋಧಿಸುವುದಿಲ್ಲ. ಆದರೆ ಹೆಚ್ಚುವರಿ ಶಿಕ್ಷಣ ವರ್ಗಾವಣೆ ಎಂಬ ನೆಲೆಯಲ್ಲಿ ಅವೈಜ್ಞಾನಿಕವಾಗಿ ಮಾನದಂಡವನ್ನುಟ್ಟುಕೊಂಡು ಶಿಕ್ಷಕರನ್ನು ವರ್ಗಾಯಿಸುತ್ತಿರುವುದರಿಂದ ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗಿದೆ. ಈ ಸಮಸ್ಯೆಯನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರಿಹರಿಸದೆ ಶಿಕ್ಷಕರನ್ನು ವರ್ಗಾಯಿಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಮಂದಿ ವಿದ್ಯಾವಂತ ನಿರುದ್ಯೋಗಿಗಳಿದ್ದರೂ ಅವರನ್ನು ನೇಮಿಸದೆ, ಇರುವ ಶಿಕ್ಷಕರನ್ನು ಬೇರೆ ಕಡೆ ವರ್ಗಾವಣೆ ಮಾಡುತ್ತಿರುವುದು ಸರಕಾರಿ ಶಾಲೆಗಳ ಮಕ್ಕಳ ಪೋಷಕರನ್ನು ರೊಚ್ಚಿಗೆಬ್ಬಿಸಿದೆ. ಇದೇ ರೀತಿ ಮುಂದುವರಿದರೆ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಪ್ರತಿಭಟನೆ ನಡೆಸುವುದಾಗಿ ಪೋಷಕರು ಹೇಳಿಕೆ ನೀಡುತ್ತಿರುವುದು ಕಳವಳಕಾರಿ ಘಟನೆಯಾಗಿದೆ. ಇದರಿಂದ ದಲಿತ, ಕಾರ್ಮಿಕರ ಮಕ್ಕಳು ಸಂವಿಧಾನದತ್ತವಾದ ಶಿಕ್ಷಣದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈ ಸಮಸ್ಯೆ ಪರಿಹಾರಿಸಲು ತುರ್ತು ಗಮನಹರಿಸಬೇಕು ಎಂದು ಲೋಲಾಕ್ಷ ಆಗ್ರಹಿಸಿದ್ದಾರೆ.
ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಪೋಷಕರನ್ನು ಗುರುವಾರ ಪೋಷಕರು ಬಂಧಿಸಿ ಬಿಡುಗಡೆಗೊಳಿಸಿದ ಘಟನೆ ನಡೆದಿದೆ. ನಮ್ಮ ಮಕ್ಕಳು ಹೋಗುವ ಶಾಲೆಯಲ್ಲಿ ಶಿಕ್ಷಕರು ಇಲ್ಲದೆ ಇದ್ದರೆ ಅವರನ್ನು ನಾವು ಆ ಶಾಲೆಗೆ ಏಕೆ ಕಳುಹಿಸಬೇಕು ಎಂದು ಪೋಷಕರು ಪ್ರತಿಭಟನೆಗೆ ಇಳಿದಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಗಮನಕ್ಕೆ ತಂದಾಗ ಅವರು ತಕ್ಷಣ ಸ್ಪಂದಿಸಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರುವವರೆಗೆ ಕೌನ್ಸಿಲಿಂಗ್ ಮೂದೂಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ, ಜಿಲ್ಲಾಮಟ್ಟದ ಉನ್ನತ ಅಧಿಕಾರಿಗಳು ಈ ಆದೇಶವನ್ನು ಪಾಲಿಸಿದಿರುವುದು ವಿಷಾದನೀಯ. ಮಕ್ಕಳ ಹಕ್ಕುಗಳ ರಕ್ಷಣ ಆಯೋಗಕ್ಕೂ ಈ ಬಗ್ಗೆ ದೂರು ನೀಡಲಾಗುವುದು ಎಂದು ರೆನ್ನಿ ಡಿ ಸೋಜ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಹೆಗ್ಡೆ ಉಳೆಪ್ಪಾಡಿ, ನಿತಿನ್ ಕುಮಾರ್, ಖೈರುನ್ನೀಸಾ ಬೆಂಗ್ರೆ, ಲೂಯೀಸ್ ಕುಂಪಲ ಚೇತನ ಮೂಡುಶೆಡ್ಡೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







