ಅಲೆಪ್ಪೊದಲ್ಲಿ ಪ್ರತಿ ದಿನ 3 ಗಂಟೆ ಯುದ್ಧವಿರಾಮ: ರಶ್ಯ
ಮಾಸ್ಕೊ, ಆ. 11: ಸಿರಿಯದ ಮುತ್ತಿಗೆಗೊಳಗಾಗಿರುವ ಅಲೆಪ್ಪೊ ನಗರದಲ್ಲಿ ಸಿಕ್ಕಿಹಾಕಿಕೊಂಡಿರುವ ಜನರಿಗೆ ಮಾನವೀಯ ನೆರವು ತಲುಪಿಸಲು ಪ್ರತಿ ದಿನ ಮೂರು ಗಂಟೆಗಳ ಕಾಲ ಯುದ್ಧವಿರಾಮ ಆಚರಿಸುವುದಾಗಿ ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.
ಆದರೆ, ನಗರದ ಅಗತ್ಯಗಳನ್ನು ಪೂರೈಸಲು ಇದು ಸಾಕಾಗುವುದಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.
‘‘ಅಲೆಪ್ಪೊಗೆ ಬರುವ ವಿಶ್ವಸಂಸ್ಥೆಯ ವಾಹನಗಳಿಗೆ ಸಂಪೂರ್ಣ ರಕ್ಷಣೆ ನೀಡುವುದಕ್ಕಾಗಿ ಶುಕ್ರವಾರದಿಂದ ಜಾರಿಗೆ ಬರುವಂತೆ ಪ್ರತಿ ದಿನ ಸ್ಥಳೀಯ ಸಮಯ ರಾತ್ರಿ 10ರಿಂದ ಮರು ದಿನ ಮುಂಜಾನೆ 1 ಗಂಟೆಯವರೆಗೆ ಯುದ್ಧವಿರಾಮ ಆಚರಿಸಲಾಗುವುದು. ಈ ಅವಧಿಯಲ್ಲಿ ಎಲ್ಲ ಸೇನಾ ಸಂಘರ್ಷಗಳು, ವಿಮಾನ ದಾಳಿಗಳು ಮತ್ತು ಫಿರಂಗಿ ದಾಳಿಗಳನ್ನು ಸ್ಥಗಿತಗೊಳಿಸಲಾಗುವುದು’’ ಎಂದು ರಶ್ಯ ಸೇನೆಯ ಲೆಫ್ಟಿನೆಂಟ್ ಜನರಲ್ ಸರ್ಗೀ ರುಡ್‌ಸ್ಕೊಯ್ ಪತ್ರಕರ್ತರಿಗೆ ತಿಳಿಸಿದರು.
ಆದಾಗ್ಯೂ, ಇದು ಎಷ್ಟು ದಿನಗಳ ಕಾಲ ಮುಂದುವರಿಯಲಿದೆ ಎಂಬುದನ್ನು ತಿಳಿಸಲು ಅವರು ನಿರಾಕರಿಸಿದರು. ರಶ್ಯದ ಘೋಷಣೆಯ ಸ್ವಲ್ಪವೇ ಹೊತ್ತಿನ ಬಳಿಕ ಹೇಳಿಕೆಯೊಂದನ್ನು ನೀಡಿದ ವಿಶ್ವಸಂಸ್ಥೆಯ ಮಾನವೀಯ ನೆರವಿನ ಮಹಾ ಅಧೀನ ಕಾರ್ಯದರ್ಶಿ ಸ್ಟೀಫನ್ ಒ’ಬ್ರಿಯನ್, ನಾಗರಿಕರ ಮಾನವೀಯ ಅಗತ್ಯಗಳನ್ನು ಈಡೇರಿಸಲು ದಿನಕ್ಕೆ ಮೂರು ಗಂಟೆಗಳ ಅವಧಿ ಸಾಕಾಗುವುದಿಲ್ಲ ಎಂದರು.





