ಒಲಿಂಪಿಕ್ಸ್ ಅಥ್ಲೆಟಿಕ್ಸ್ ಸ್ಪರ್ಧೆಗಳು ಇಂದು ಆರಂಭ
ಉಸೇನ್ ಬೋಲ್ಟ್ ಆಕರ್ಷಣೆಯ ಕೇಂದ್ರಬಿಂದು

ರಿಯೋ ಡಿಜನೈರೊ, ಆ.11: ಒಲಿಂಪಿಕ್‌ನ ಟ್ರಾಕ್ ಆ್ಯಂಡ್ ಫೀಲ್ಡ್ ಸ್ಪರ್ಧೆಗಳು ಶುಕ್ರವಾರ ಆರಂಭವಾಗಲಿದ್ದು, ಜಮೈಕಾದ ಓಟದ ರಾಜ ಉಸೇನ್ ಬೋಲ್ಟ್ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.
ರಶ್ಯದ ಅಥ್ಲೀಟ್‌ಗಳ ವಿರುದ್ಧ ಡೋಪಿಂಗ್ ಹಗರಣ ಆರೋಪ ಕೇಳಿಬಂದರೂ ಬೋಲ್ಟ್ ಈಗಲೂ ತನ್ನ ಅಥ್ಲೆಟಿಕ್ಸ್‌ನಲ್ಲಿ ಕ್ಲೀನ್ ಇಮೇಜ್ ಕಾಯ್ದುಕೊಂಡಿದ್ದಾರೆ.
ಕೊನೆಯ ಒಲಿಂಪಿಕ್ಸ್ ಆಡುತ್ತಿರುವ ಜಮೈಕಾದ ಸ್ಟಾರ್ ಓಟಗಾರ ಬೋಲ್ಟ್ 100 ಮೀ. 200 ಮೀ. ಹಾಗೂ 4-100 ಮೀ. ರಿಲೇಯಲ್ಲಿ ಚಿನ್ನದ ಪದಕ ಗೆಲ್ಲುವತ್ತ ಚಿತ್ತವಿರಿಸಿದ್ದಾರೆ. 2008 ಹಾಗೂ 2012ರ ಒಲಿಂಪಿಕ್ಸ್‌ನಲ್ಲಿ ಎಲ್ಲ ಮೂರು ಸ್ಪರ್ಧೆಗಳಲ್ಲಿ ಜಯ ಸಾಧಿಸಿ ಕ್ಲೀನ್‌ಸ್ವೀಪ್ ಸಾಧಿಸಿದ್ದ ಬೋಲ್ಟ್ ಈ ಬಾರಿಯೂ ಹಿಂದಿನ ಟ್ರಿಪಲ್ ಸಾಧನೆಯನ್ನು ಪುನರಾವರ್ತಿಸುವ ವಿಶ್ವಾಸದಲ್ಲಿ ಕಣಕ್ಕಿಳಿಯಲಿದ್ದಾರೆ.
ಬೋಲ್ಟ್ ರವಿವಾರ 100 ಮೀ. ನ ಆರಂಭಿಕ ಹೀಟ್ಸ್‌ನಲ್ಲಿ ಭಾಗವಹಿಸುವ ಮೂಲಕ ಒಲಿಂಪಿಕ್ಸ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಬೋಲ್ಟ್ 100 ಮೀ. ಓಟವನ್ನು 9.58 ಸೆಕೆಂಡ್‌ನಲ್ಲಿ ಕ್ರಮಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಬೋಲ್ಟ್‌ನ ದೀರ್ಘಕಾಲದ ಎದುರಾಳಿ ಜಸ್ಟಿನ್ ಗಾಟ್ಲಿನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.
ಮಹಿಳೆಯರ 10,000 ಮೀ. ಓಟದಲ್ಲಿ ಇಥಿಯೋಪಿಯದ ಹಾಲಿ ಚಾಂಪಿಯನ್ ಟಿರುನೆಶ್ ಡಿಬಾಬಾ ವೈಯಕ್ತಿಕ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಈ ಬಾರಿ ಹ್ಯಾಟ್ರಿಕ್ ಚಿನ್ನ ಜಯಿಸಿ ಒಲಿಂಪಿಕ್ಸ್‌ನಲ್ಲಿ ಹೊಸ ಇತಿಹಾಸ ಬರೆಯಲು ಯತ್ನಿಸಲಿದ್ದಾರೆ.
ಜಮೈಕಾದ ಶೆಲ್ಲಿ-ಆ್ಯನ್ ಫ್ರೆಸೆರ್-ಪ್ರೈಸ್ ಮಹಿಳೆಯರ 100 ಮೀ. ಓಟದಲ್ಲಿ ಹ್ಯಾಟ್ರಿಕ್ ಒಲಿಂಪಿಕ್ ಚಿನ್ನ ಜಯಿಸುವತ್ತ ಚಿತ್ತವಿರಿಸಿದ್ದಾರೆ.
29ರಹರೆಯದ ಪ್ರೈಸ್ ತಮ್ಮದೇ ದೇಶದ ಎಲೈನ್ ಥಾಮ್ಸನ್‌ರಿಂದ ಕಠಿಣ ಸವಾಲು ಎದುರಿಸಲಿದ್ದಾರೆ. ಥಾಮ್ಸನ್ 10.70 ಸೆಕೆಂಡ್‌ನಲ್ಲಿ ಗುರಿ ತಲುಪಿ ಈವರ್ಷ ವಿಶ್ವದ ಅತ್ಯಂತ ವೇಗದ ಮಹಿಳೆ ಎನಿಸಿಕೊಂಡಿದ್ದಾರೆ.
ಬ್ರಿಟನ್‌ನ ಮೊಹಮ್ಮದ್ ಫರ್ಹಾ 2012ರ ಒಲಿಂಪಿಕ್ಸ್‌ನಲ್ಲಿ 10,000 ಓಟದಲ್ಲಿ ಜಯಿಸಿದ್ದ ಚಿನ್ನದ ಪದಕವನ್ನು ತನ್ನಲ್ಲೆ ಉಳಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಬ್ರಿಟನ್‌ನ ಜೆಸ್ಸಿಕಾ ಎನ್ನಿಸ್ ಶುಕ್ರವಾರ ಹೆಪ್ಟಾತ್ಲಾನ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಟ ಆರಂಭಿಸಲಿದ್ದಾರೆ.







