ವಿಶ್ವದಾಖಲೆಯೊಂದಿಗೆ ರಹೀಂಗೆ ವೇಟ್‌ಲಿಫ್ಟಿಂಗ್ ಚಿನ್ನ

ರಿಯೊ ಡಿಜನೈರೊ, ಆ.11: ಕಝಕಿಸ್ತಾನದ ನಿಜತ್ ರಹೀಂ ಪುರುಷರ 77 ಕೆಜಿ ತೂಕ ವಿಭಾಗದಲ್ಲಿ ಚೀನಾದ ಸೂಪರ್ ಸ್ಟಾರ್ ಲಿಯು ಕ್ಸಿಯೊಜುನ್‌ಗೆ ಆಘಾತ ನೀಡಿ ಒಲಿಂಪಿಕ್ಸ್ ಚಿನ್ನದ ಪದಕವನ್ನು ಬಾಚಿಕೊಂಡಿದ್ದಾರೆ.
ಬುಧವಾರ ನಡೆದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಟ್ಟು 379 ಕೆಜಿ ತೂಕವನ್ನು ಎತ್ತಿಹಿಡಿದು ಕ್ಲೀನ್ ಹಾಗೂ ಜರ್ಕ್‌ನಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದರು.
ಚಿನ್ನದ ಶೂಗಳನ್ನು ಧರಿಸಿ ಸ್ಪರ್ಧಿಸಿದ ಲಿಯೂ ಎರಡನೆ ಸುತ್ತಿನ ತನಕ ರಹೀಂಗಿಂತ ಮುಂದಿದ್ದರು. ಆದರೆ, ಅವರು ಜರ್ಕ್‌ನಲ್ಲಿ 202 ಕೆಜಿ ಎತ್ತಿ ಹಿಡಿಯಲಷ್ಟೇ ಶಕ್ತರಾದರು.
ರಹೀಂ ಕಝಕಿಸ್ತಾನಕ್ಕೆ ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಮೊದಲ ಬಾರಿ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಕಝಕಿಸ್ತಾನದ ಹಲವು ವೇಟ್‌ಲಿಫ್ಟರ್‌ಗಳು ಡೋಪಿಂಗ್ ಬಲೆಗೆ ಬಿದ್ದ ಕಾರಣ ಕಝಕಿಸ್ತಾನ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಬಗ್ಗೆ ಸಂಶಯವಿತ್ತು. ಬೀಜಿಂಗ್ ಹಾಗೂ ಲಂಡನ್ ಗೇಮ್ಸ್ ಮಾದರಿಯ ಮರು ಪರೀಕ್ಷೆ ಮಾಡಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ವಿಫಲವಾದ ಹಿನ್ನೆಲೆಯಲ್ಲಿ ಕಝಕಿಸ್ತಾನಕ್ಕೆ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು.





