14 ವರ್ಷದ ಬಾಲಕನನ್ನು ಕೊಂದ ಅಮೆರಿಕ ಪೊಲೀಸರು
ಲಾಸ್ ಏಂಜಲಿಸ್, ಆ. 11: ಓರ್ವ ಪೊಲೀಸ್ ಅಧಿಕಾರಿಯು 14 ವರ್ಷದ ಮೆಕ್ಸಿಕೊ ಮೂಲದ ಬಾಲಕನೊಬ್ಬನನ್ನು ಮಂಗಳವಾರ ಕೊಂದಿದ್ದಾರೆ ಎಂದು ಲಾಸ್ ಏಂಜಲಿಸ್ ಪೊಲೀಸರು ಬುಧವಾರ ತಿಳಿಸಿದ್ದಾರೆ. ಬಾಲಕನು ಪೊಲೀಸ್ ಅಧಿಕಾರಿಯತ್ತ ಗುಂಡು ಹಾರಿಸಿದ ಎಂದು ಹೇಳುವ ಮೂಲಕ ಹತ್ಯೆಯನ್ನು ಪೊಲೀಸರು ಸಮರ್ಥಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ‘ಲಾಸ್ ಏಂಜಲಿಸ್ ಟೈಮ್ಸ್’ವರದಿ ಮಾಡಿದೆ.
ಲಾಸ್ ಏಂಜಲಿಸ್‌ನ ಉಪನಗರವೊಂದರಲ್ಲಿ ಜನರು ಅಪರಾಧ ಗುಂಪೊಂದನ್ನು ವೈಭವೀಕರಿಸುವ ಗೋಡೆಬರಹದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿಯ ಆಧಾರದಲ್ಲಿ ಇಬ್ಬರು ಪೊಲೀಸರು ಸ್ಥಳಕ್ಕೆ ತೆರಳಿದರು. ಪೊಲೀಸರು ಅಲ್ಲಿಗೆ ತಲುಪಿದಾಗ ‘‘ಶಂಕಿತ’’ನು ಓಡಲು ಆರಂಭಿಸಿದನು ಹಾಗೂ ಪೊಲೀಸರು ಆತನ ಬೆಂಬತ್ತಿದರು ಎಂದು ಪೊಲೀಸರು ಹೇಳಿದ್ದಾರೆ. ಶಂಕಿತನು ಪೊಲೀಸರತ್ತ ಗುಂಡು ಹಾರಿಸಿದಾಗ ಓರ್ವ ಪೊಲೀಸ್ ಅಧಿಕಾರಿಯು ಆತನಿಗೆ ಗುಂಡು ಹಾರಿಸಿದರು ಎಂದು ಪೊಲೀಸರು ಹೇಳಿದರು.
ಆದರೆ, ಬಾಲಕನು ಪೊಲೀಸರತ್ತ ಗುಂಡು ಹಾರಿಸಿಲ್ಲ ಎಂಬುದಾಗಿ ಕೆಲವು ಸಾಕ್ಷಿಗಳು ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. ಪೊಲೀಸರು ನಿರಾಯುಧ ಕರಿಯರನ್ನು ಕೊಲ್ಲುತ್ತಿದ್ದು, ಜನಾಂಗೀಯ ತಾರತಮ್ಯ ತೋರುತ್ತಿದ್ದಾರೆ ಎಂಬ ಗಂಭೀರ ಆರೋಪಗಳ ನಡುವೆಯೇ ಇನ್ನೊಂದು ಕೊಲೆ ಸಂಭವಿಸಿರುವುದು ಗಮನಾರ್ಹವಾಗಿದೆ.





