ರಾಜ್ಯದ ಬಡವರಿಗೆ 36,254 ಮನೆಗಳ ನಿರ್ಮಾಣ
ಕೇಂದ್ರ ವಸತಿ ಸಚಿವಾಲಯ ಅನುಮೋದನೆ
ಹೊಸದಿಲ್ಲಿ/ಬೆಂಗಳೂರು, ಆ.11: ಕರ್ನಾಟಕ ಮತ್ತು ಹರಿಯಾಣದಲ್ಲಿ 1,491 ಕೋಟಿ ರೂ.ವೆಚ್ಚದಲ್ಲಿ 37,013ಮನೆಗಳನ್ನು ನಗರ ಪ್ರದೇಶದ ಬಡ ಜನರಿಗೆ ನಿರ್ಮಿಸಲು ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯವು ಅನುಮೋದನೆ ನೀಡಿದೆ.
ಹೂಪಾ(ಏಖಿಅ) ಕಾರ್ಯದರ್ಶಿ ಡಾ.ನಂದಿತಾ ಮುಖರ್ಜಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರೀಯ ಅಂತರ ಸಚಿವಾಲಯಗಳ ಮಂಜೂರಾತಿ ಮತ್ತು ನಿಗಾ ಸಮಿತಿಯು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗಾಗಿ ಕರ್ನಾಟಕದಲ್ಲಿ 1,468 ಕೋಟಿ ರೂ.ವೆಚ್ಚದಲ್ಲಿ 36,254 ಮನೆಗಳನ್ನು ಮತ್ತು ಹರಿಯಾಣದಲ್ಲಿ 23 ಕೋಟಿ ರೂ.ವೆಚ್ಚದಲ್ಲಿ 759 ಮನೆಗಳನ್ನು ನಿರ್ಮಿಸಲು ಅನುಮೋದನೆ ನೀಡಿತು.
ಕೊಳೆಗೇರಿ ನಿವಾಸಿಗಳ ಪುನರ್ವಸತಿಗಾಗಿ ಪ್ರಧಾನಮಂತ್ರಿಗಳ ವಸತಿ ಯೋಜನೆ (ನಗರ)ಯ ಪಾಲುದಾರಿಕೆಯೊಂದಿಗೆ ಕರ್ನಾಟಕದಲ್ಲಿ 8 ನಗರಗಳಲ್ಲಿ 12,371 ವಸತಿ ಘಟಕಗಳನ್ನು ಕೈಗೆಟಕುವ ದರದ ವಸತಿ ಯೋಜನೆಯಡಿ ನಿರ್ಮಿಸಲಾಗುತ್ತಿದೆ.
ಮನೆಗಳ ನಗರವಾರು ವಿವರ: ಗದಗ - 3,630, ಬೆಂಗಳೂರು (ಬಸವನಗುಡಿ) -1,699, ಬೀದರ್-1,500, ಮೈಸೂರು-1,355, ಬಳ್ಳಾರಿ-1,188, ರಾಯಚೂರು-1,050, ವಿಜಯಪುರ-1,028, ಪದ್ಮನಾಭನಗರ (ಬೆಂಗಳೂರು)- 895 ಮತ್ತು ಬಾಗಲಕೋಟೆಯಲ್ಲಿ 784 ಮನೆಗಳನ್ನು ನಿರ್ಮಿಸಲಾಗುತ್ತಿದೆ.
ಜೊತೆಗೆ 23,883 ಮನೆಗಳನ್ನು ಕರ್ನಾಟಕದ 207 ನಗರ ಮತ್ತು ಪಟ್ಟಣಗಳಲ್ಲಿ ನಗರ ಪ್ರದೇಶದ ಬಡಜನರ ಅನುಕೂಲಕ್ಕಾಗಿ ಪಿಎಂಎವೈ (ನಗರ) ಫಲಾನುಭವಿಗಳ ಆಧಾರಿತ ನಿರ್ಮಾಣ ಯೋಜನೆಯೊಂದಿಗೆ ನಿರ್ಮಿಸಲಾಗುತ್ತಿದೆ.
ಕೇಂದ್ರ ಸರಕಾರವು ಕರ್ನಾಟಕದಲ್ಲಿ ನಗರ ಪ್ರದೇಶದ ಬಡಜನರಿಗಾಗಿ ಈ ಮನೆಗಳನ್ನು ನಿರ್ಮಾಣ ಮಾಡಲು ಒಟ್ಟು 558 ಕೋಟಿ ರೂ.ನೆರವನ್ನು ಒದಗಿಸುತ್ತಿದೆ. ಕಳೆದ ಹಣಕಾಸು ವರ್ಷದಲ್ಲಿ ಹೂಪ ಸಚಿವಾಲಯವು ಕರ್ನಾಟಕದ ನಗರ ಪ್ರದೇಶಗಳ ಬಡಜನರ ಅನುಕೂಲಕ್ಕಾಗಿ 16,522 ಮನೆಗಳ ನಿರ್ಮಾಣಕ್ಕೆ ತನ್ನ ಅನುಮೋದನೆ ನೀಡಿತ್ತು. ಇದರೊಂದಿಗೆ ರಾಜ್ಯದ ನಗರ ಬಡಜನರಿಗಾಗಿ ಮಂಜೂರಾಗಿರುವ ಒಟ್ಟು ಮನೆಗಳ ಸಂಖ್ಯೆ ಈವರೆಗೆ 53,776 ಆಗಿದೆ. ಜೊತೆಗೆ ಹೂಪಾ ಸಚಿವಾಲಯವು ಇಂದು ಹರಿಯಾಣದ ಯಮುನಾನಗರ್ -ಜಗಧಾರಿಗಳ 11 ಕೊಳಗೇರಿಗಳಲ್ಲಿ ಪಿಎಂಎವೈ (ನಗರ) ಫಲಾನುಭವಿ ಆಧಾರಿತ ನಿರ್ಮಾಣ ಯೋಜನೆಯಡಿ ಒಟ್ಟು 23 ಕೋಟಿ ರೂ.ವೆಚ್ಚದಲ್ಲಿ 759 ಮನೆಗಳ ನಿರ್ಮಾಣಕ್ಕೂ ಅನುಮೋದನೆ ನೀಡಿದೆ. ಇದಕ್ಕೆ ಕೇಂದ್ರ ಸರಕಾರ ಒಟ್ಟು 11 ಕೋಟಿ ರೂ.ನೆರವು ಒದಗಿಸುತ್ತದೆ.
ಹರಿನಗರ್, ಲಜಪತ್ ನಗರ್, ಮಿಶ್ರಾ ಕಾಲನಿ, ಮುಖರ್ಜಿ ಪಾರ್ಕ್, ತೀರ್ಥನಗರ್, ಮಧುಬನ್ ಕಾಲನಿ, ಭಗೀರಥ್ ಕಾಲನಿ, ಜಮ್ಮು ಕಾಲನಿ, ಹಮಾದ ಕಾಲನಿ ಮತ್ತು ಬುರ್ಲಾ ಕಾಲೋನಿ ಗಳಲ್ಲಿರುವವರಿಗೆ ಈ ನಿರ್ಮಾಣದಿಂದ ಲಾಭವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.





