ಪುತ್ತಿಗೆಯಲ್ಲಿ ಬೀಡಿ ಕಾರ್ಮಿಕರ ಪ್ರಚಾರ ಆಂದೋಲನ ಸಭೆ

ಮೂಡುಬಿದಿರೆ, ಆ.11: ಕೊಟ್ಪಾಕಾಯ್ದೆ ಜಾರಿಯನ್ನು ವಿರೋಧಿಸಿ ಪುತ್ತಿಗೆ ಗ್ರಾಪಂ ಕಚೇರಿಯ ಎದುರು ಮೂಡುಬಿದಿರೆ ಪ್ರದೇಶ ಬೀಡಿ ಕೆಲಸಗಾರರ ಸಂಘ(ಸಿಐಟಿಯು) ವತಿಯಿಂದ ಗುರುವಾರ ಪ್ರಚಾರ ಆಂದೋಲನ ಸಭೆ ಹಾಗೂ ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಬೀಡಿ ಫೆಡರೇಶನ್ ಜಿಲ್ಲಾ ಉಪಾಧ್ಯಕ್ಷೆ, ಮೂಡುಬಿದಿರೆ ವಲಯದ ಅಧ್ಯಕ್ಷೆ ರಮಣಿ, ಧೂಮಪಾನ ನಿಷೇಧ ಕಾನೂನನ್ನು ಮುಂದಿಟ್ಟು ಬೀಡಿ ಕೈಗಾರಿಕೆಯ ಸವಲತ್ತು ಕಸಿಯುವ ಹುನ್ನಾರ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ನಡೆಯುತ್ತಿದೆ.
ಕಾರ್ಮಿಕರ ಹಕ್ಕನ್ನು ಕಸಿಯುವ ಯಾವುದೇ ಪಿತೂರಿಗಳನ್ನು ಸಿಐಟಿಯು ಸಹಿಸುವುದಿಲ್ಲ. ಪ್ರತಿ ಪಂಚಾಯತ್‌ಗಳು ಬೀಡಿ ಕಾರ್ಮಿಕರ ಸರ್ವೇ ಮಾಡಿ, ಗುರುತಿನ ಚೀಟಿ ನೀಡಬೇಕಾಗಿತ್ತು. ಮಹಿಳಾ ಕಾರ್ಮಿಕರಿಗೆ ಸವಲತ್ತು ನೀಡುವ ಬದಲು, ಬೀಡಿಯನ್ನು ನಿಷೇಧಿಸಿ, ಸಾವಿರಾರು ಮಹಿಳಾ ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿರುವುದು ಸರಿಯಲ್ಲ. ಕಾರ್ಮಿಕರಿಗೆ ತೊಂದರೆ ನೀಡಿ ಆಡಳಿತ ನಡೆಸುವ ಯಾವುದೇ ಸರಕಾರವನ್ನು ಪತನಗೊಳಿಸುವ ಶಕ್ತಿ ಕಾರ್ಮಿಕ ಸಂಘಟನೆಗಳಿಗಿದೆ ಎಂದು ಎಚ್ಚರಿಸಿದರು. ಬೀಡಿ ಫೆೆಡರೇಶನ್‌ನ ಜಿಲ್ಲಾ ಉಪಾಧ್ಯಕ್ಷ ಸದಾಶಿವ ದಾಸ್, ಮೂಡುಬಿದಿರೆ ವಲಯ ಕಾರ್ಯದರ್ಶಿ ರಾಧಾ, ಪದಾಧಿಕಾರಿಗಳಾದ ಗಿರಿಜಾ, ಲಕ್ಷ್ಮೀ, ಪದ್ಮಾವತಿ, ಸುಂದರ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸೀತಾರಾಮ ಶೆಟ್ಟಿ, ಕಾರ್ಯದರ್ಶಿ ಶಂಕರ ಸಹಿತ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.





