ಮಿಶ್ರ ಡಬಲ್ಸ್: ಎಂಟರ ಘಟಕ್ಕೆ ಸಾನಿಯಾ- ಬೋಪಣ್ಣ ಜೋಡಿ
ಭಾರತದ ಪದಕ ಆಸೆ ಇನ್ನೂ ಜೀವಂತ!

ರಿಯೊ ಡಿ ಜನೈರೊ: ರಿಯೊ ಒಲಿಂಪಿಕ್ಸ್‌ನ ಆರನೇ ದಿನ ಭಾರತದ ಬ್ಯಾಡ್ಮಿಂಟನ್ ಪಟುಗಳು ಪದಕ ಬೇಟೆಯ ಅಭಿಯಾನಕ ಆರಂಭಿಸಿದ್ದಾರೆ. ಟೆನಿಸ್‌ನಲ್ಲಿ ಸಾನಿಯಾ ಜೋಡಿ ಗೆಲುವು ಸಾಧಿಸಿದ್ದರೆ, ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಭಾರತದ ಪದಕ ಆಸೆ ಜೀವಂತವಾಗಿ ಉಳಿಸಿದ್ದಾರೆ.
ಸಾನಿಯಾ ಮಿರ್ಜಾ ರೋಹನ್ ಬೋಪಣ್ಣ ಜೋಡಿ ಟೆನಿಸ್ ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತತಲುಪಿದೆ. ಸಾನಿಯಾ ಜೋಡಿ ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಟೋಸುರ್- ಪಿಯರ್ಸ್ ಜೋಡಿಯನ್ನು 7-5, 6-4 ನೇರ ಸೆಟ್ಟುಗಳಿಂದ ಸೋಲಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಜೋಡಿ ಆಂಡಿ ಮರ್ರೆ- ಹೆತುರ್ ವಾಟ್ಸನ್ ಜೋಡಿಯನ್ನು ಎದುರಿಸಲಿದೆ.
ಜರ್ಮನಿ- ಅರ್ಜೆಂಟೀನಾ ತಂಡಗಳ ನಡುವಿನ ಪಂದ್ಯ ಡ್ರಾನಲ್ಲಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಭಾರತೀಯ ಪುರುಷರ ಹಾಕಿ ತಂಡ ಕೂಡಾ ಎಂಟರ ಘಟ್ಟಕ್ಕೆ ಮುನ್ನಡೆದಿದೆ.
ಆದರೆ ಮಹಿಳಾ ಹಾಕಿ ತಂಡ ಅಮೆರಿಕಕ್ಕೆ 0-3ರಿಂದ ಶರಣಾಗಿ ಬಹುತೇಕ ಕೂಟದಿಂದ ಹೊರಬಿದ್ದಿದೆ. ಕೊನೆಯ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಭಾರತ ಸೆಣೆಸಲಿದ್ದು, ಅಲ್ಲಿ ಜಯ ಸಾಧಿಸುವ ಜತೆಗೆ, ಜಪಾನ್- ಅಮೆರಿಕ ಪಂದ್ಯದಲ್ಲಿ ಅಮೆರಿಕ ಜಯ ಸಾಧಿಸಿದರಷ್ಟೇ ಭಾರತ ಕ್ವಾರ್ಟರ್ ಫೈನಲ್ ತಲುಪಲು ಅವಕಾಶ ಇರುತ್ತದೆ.
ಈ ಮಧ್ಯೆ ಇಡೀ ದೇಶವೇ ತಲೆ ತಗ್ಗಿಸುವಂಥ ಮತ್ತೊಂದು ಬೆಳವಣಿಗೆ ಕ್ರೀಡಾಂಗಣದಾಚೆ ನಡೆದಿದ್ದು, ಕ್ರೀಡಾ ಸಚಿವ ವಿಜಯ್ ಗೋಯಲ್ ಅವರೊಂದಿಗೆ ಅವರ ಚೇಲಾಗಳು ಮಾನ್ಯತಾ ಪತ್ರ ಇಲ್ಲದಿದ್ದರೂ ಅವರ ಜತೆ ಅಕ್ರಮವಾಗಿ ಪ್ರವೇಶಿಸುತ್ತಿರುವುದು ಹಾಗೂ ಅಸಭ್ಯವಾಗಿ ನಡೆದುಕೊಳ್ಳುವುದನ್ನು ತಕ್ಷಣ ನಿಲ್ಲಿಸದಿದ್ದರೆ, ಸಚಿವರಿಗೆ ನೀಡಿದ ಮಾನ್ಯತಾ ಪತ್ರವನ್ನು ರದ್ದು ಮಾಡುವುದಾಗಿ ಸಂಘಟನಾ ಸಮಿತಿ ಎಚ್ಚರಿಕೆ ನೀಡಿದೆ.







