ಜಿಶಾ ಕೊಲೆ ಪ್ರಕರಣ ತನಿಖೆಗೆ ಹೆಚ್ಚು ಸಮಯದ ಅಗತ್ಯವಿದೆ: ಪೊಲೀಸ್
ಕೊಚ್ಚಿ, ಆ.12: ಪೆರುಂಬಾವೂರ್ ಜಿಶಾ ಕೊಲೆ ಪ್ರಕರಣದ ಆರೋಪ ಪಟ್ಟಿ ಸಲ್ಲಿಸಲು ಹೆಚ್ಚು ಸಮಯದ ಅಗತ್ಯವಿದೆ ಎಂದು ಪೊಲೀಸರು ಪ್ರಿನ್ಸಿಪಲ್ ಸೆಷನ್ಸ್ ಕೋರ್ಟ್ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಆರೋಪಿ ಅಮೀರುಲ್ ಇಸ್ಲಾಮ್ ಜಾಮೀನಿಗೆ ಅರ್ಜಿಸಲ್ಲಿಸಿದ ಬೆನ್ನಿಗೆ ತನಿಖೆ ಪೂರ್ತಿಯಾಗಲು ಹೆಚ್ಚು ಸಮಯವನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿ ಪ್ರೋಸಿಕ್ಯೂಶನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
ಕೊಲೆಪ್ರಕರಣಗಳಲ್ಲಿ ತನಿಖೆ ಪೂರ್ತಿಗೊಳಿಸಲು 90 ದಿವಸಗಳ ಅವಧಿಯನ್ನು ನೀಡಲಾಗುತ್ತದೆ. ಈ ಸಮಯದೊಳಗೆ ಆರೋಪಪಟ್ಟಿ ಸಲ್ಲಿಸದಿದ್ದರೆ ಆರೋಪಿಗೆ ಶರ್ತಬದ್ಧ ಜಾಮೀನು ಲಭಿಸುತ್ತದೆ. ಆದರೆ, ಅಮಿರುಲ್ ಇಸ್ಲಾಮ್ ವಿರುದ್ಧ ದಲಿತ ದೌರ್ಜನ್ಯ ನಿರೋಧ ಕಾನೂನು ಪ್ರಕಾರ ಆರೋಪ ಪಟ್ಟಿ ಸಲ್ಲಿಸಲು 60 ದಿವಸಗಳಿಗೆ ಕಡಿಮೆ ಅವಧಿ ದೊರಕಿದೆ. ಈ ಹಿನ್ನೆಲೆಯಲ್ಲಿ ಜಾಮೀನು ದೊರಕಬಹುದಾದ ಸಾಧ್ಯತೆಯನ್ನುಮನಗಂಡು ತನಿಖೆಗೆ ಹೆಚ್ಚು ಸಮಯವನ್ನು ಕೋರಿ ಪೊಲೀಸರು ಕೋರ್ಟಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಅರುವತ್ತು ದಿವಸಗಳೊಳಗೆ ಆರೋಪಪಟ್ಟಿಸಲ್ಲಿಸುವ ಅಗತ್ಯವಿಲ್ಲ ಎಂಬುದನ್ನೆ ಬೆಟ್ಟು ಮಾಡಿ ಪ್ರಾಸಿಕ್ಯೂಶನ್ ಕೋರ್ಟಿನಲ್ಲಿ ವಾದಿಸಲಿದೆ. ಪ್ರಾಸಿಕ್ಯೂಶನ್ ಕೋರಿಕೆ ಮತ್ತು ಜಾಮೀನು ಅರ್ಜಿ ಎರಡನ್ನೂ ಕೋರ್ಟ್ ಪರಿಗಣಿಸಲಿದೆ ಎಂದು ವರದಿಯಾಗಿದೆ.