ಆನ್ ಲೈನ್ ಮೂಲಕ ಹಳೆಯ ಬೈಕ್ ಮಾರಲು ಹೋಗಿ ಪ್ರಾಣ ಕಳೆದುಕೊಂಡ ಬೆಂಗಳೂರು ಟೆಕ್ಕಿ

ಬೆಂಗಳೂರು,ಆ.12: ಆನ್ ಲೈನ್ ನಲ್ಲಿ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಮಾರಾಟ ಮಾಡುವುದು ಸುಲಭ ಆದರೆ ಅಷ್ಟೇ ಅಪಾಯಕಾರಿ ಎಂಬುದು ಬೆಂಗಳೂರಿನಲ್ಲಿ ನಡೆದ ಟೆಕ್ಕಿ ಕೊಲೆ ಪ್ರಕರಣವೊಂದರಿಂದ ಸಾಬೀತಾಗಿದೆ. ಆಗಸ್ಟ್ 5 ರಂದು ಪಶ್ಚಿಮ ಬಂಗಾಳದ ಸೋಹನ್ ಹಲ್ದಾರ್ (35) ಎಂಬ ಟೆಕ್ಕಿ ಪ್ರೆಸ್ಟೀಜ್ ಶಾಂತಿನಿಕೇತನ್ ನಲ್ಲಿರುವತಮ್ಮ ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರು ತಮ್ಮ ಬೈಕನ್ನು ಆನ್ ಲೈನ್ ಮೂಲಕ ಮಾರಾಟ ಮಾಡಲೆತ್ನಿಸಿದ್ದು ಅವರ ಬೈಕ್ ಖರೀದಿಸಲು ಆಸಕ್ತಿ ವಹಿಸಿದ್ದ ವ್ಯಕ್ತಿಯೊಬ್ಬ ಅವರನ್ನು ಕೊಲೆಗೈದು ಬೈಕ್ ಸಹಿತ ಅವರ ಎಟಿಎಂ ಕಾರ್ಡ್ ಹಾಗೂ ನಗದಿನೊಂದಿಗೆ ಪರಾರಿಯಾಗಿದ್ದಾನೆಂದು ತಿಳಿದು ಬಂದಿದೆ. ಸೋಹನ್ ಮೂವರು ಇತರ ಟೆಕ್ಕಿಗಳೊಂದಿಗೆ ಆ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ಕೊಲೆ ಸಂಬಂಧ ಪೊಲೀಸರು ಕಾರ್ತಿಕ್ ಎಂ ದೌಲತ್ ಎಂಬವನನ್ನು ಬಂಧಿಸಿದ್ದಾರೆ.
ಫೇಸ್ಬುಕ್ ಪೇಜ್ ಸೆಕೆಂಡ್ ಟು ನನ್ ನಲ್ಲಿ ಸೋಹನ್ ತನ್ನ ಕೆಟಿಎಂ ಡ್ಯೂಕ್ 390 ಬೈಕ್ ಮಾರಾಟಕ್ಕಿದೆಯೆಂದು ಜಾಹೀರಾತು ನೀಡಿದ್ದನ್ನು ಗಮನಿಸಿದ ಕಾರ್ತಿಕ್,ಸೋಹನ್ ನನ್ನು ಆಗಸ್ಟ್ 2 ರಂದು ಭೇಟಿಯಾಗಿ ಟೆಸ್ಟ್ ರೈಡ್ ನಡೆಸಿ ಬೈಕ್ ಖರೀದಿಸುವ ಇಚ್ಛೆ ವ್ಯಕ್ತಪಡಿಸಿದ್ದನು.ಆ ದಿನ ಆರೋಪಿ ಸೋಹನ್ ಜತೆಗೇ ಉಳಿದುಕೊಂಡಿದ್ದು ಇದಕ್ಕೂ ಮುನ್ನ ಆತ ಪೀಣ್ಯದ ಚಿನ್ನದ ಅಂಗಡಿಯೊಂದರಿಂದ 100 ಗ್ರಾಂ ಸಿಲ್ವರ್ ಪೊಟಾಶಿಯಂ ಸಯನೈಡ್ ಖರೀದಿಸಿದ್ದನೆನ್ನಲಾಗಿದೆ.
ಆಗಸ್ಟ್ 3 ರಂದು ಸೋಹನ್ ಹಾಗೂ ಕಾರ್ತಿಕ್ ಇಬ್ಬರೂ ಜತೆಯಾಗಿ ಮದ್ಯ ಸೇವಿಸಿದ್ದು ಸೋಹನ್ ನಿದ್ದೆಗೆ ಜಾರಿದಾಗ ಆರೋಪಿ ಆತನ ಬಾಯಿಗೆ ಸಯನೈಡ್ ತುರುಕಿದ್ದನೆನ್ನಲಾಗಿದೆ. ಸೋಹನ್ ವಾಂತಿ ಮಾಡಲಾರಂಭಿಸಿದಾಗ ಆರೋಪಿ ಅಡುಗೆ ಮನೆಗೆ ಗ್ಲುಕೋಸ್ ತರುವ ನೆಪದಲ್ಲಿ ಹೋಗಿಸಯನೈಡ್ ಮಿಶ್ರಣ ಮಾಡಿದ ನೀರು ಹಾಗೂ ಒಂದು ಸ್ಪೂನ್ ಸಕ್ಕರೆಯೊಂದಿಗೆ ಬಂದು ಅದನ್ನು ಸೋಹನ್ ಗೆ ನೀಡಿದ್ದನು. ಇದಾದ ನಂತರ ಸೋಹನ್ ಚಡಪಡಿಸಲು ಆರಂಭಿಸಿದಾಗ ಆರೋಪಿ ಆತನ ಮುಖಕ್ಕೆ ಹೊದಿಕೆ ಹಾಕಿ ಕೈಕಾಲುಗಳನ್ನು ಗಟ್ಟಿಯಾಗಿ ಅದುಮಿ ಹಿಡಿದಿದ್ದನು. ಸೋಹನ್‌ಪ್ರಾಣ ಬಿಟ್ಟ ನಂತರ ಕಾರ್ತಿಕ್ ಆತನ ಮೊಬೈಲ್ ಫೋನ್, ಎಟಿಎಂ ಕಾರ್ಡ್, ನಗದು ಹಾಗೂ ಬೈಕ್ ನೊಂದಿಗೆ ಪರಾರಿಯಾಗಿದ್ದನು.
ಸೋಹನ್ ಕೆಲಸಕ್ಕೆ ಏಕೆ ಹಾಜರಾಗಿಲ್ಲವೆಂದು ತಿಳಿಯಲು ಆತನ ಸಹೋದ್ಯೋಗಿಗಳು ಆತನನ್ನು ಹುಡುಕಿಕೊಂಡು ಬಂದಾಗ ಘಟನೆ ಬೆಳಕಿಗೆ ಬಂದಿತ್ತು. ಸಿಸಿಟಿವಿಯಲ್ಲಿ ಆರೋಪಿ ಬೈಕ್ ನೊಂದಿಗೆ ಪರಾರಿಯಾಗುವ ದೃಶ್ಯ ಕಂಡು ಬಂದಿದೆ.
ಬಂಧಿತ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆಂದು ಪೊಲೀಸರು ಹೇಳಿದ್ದಾರೆ.







