ಈ ಮಹಿಳೆ ಚಲಿಸುವ ರೈಲಿನ ಮುಂದೆ ನಿಂತರೂ ಸಾವು ಬರಲಿಲ್ಲ!

ಮುಂಬೈ, ಆ.12: ಮುಂಬೈಯ ವಿಕ್ರೋಲಿ ರೈಲು ನಿಲ್ದಾಣದಲ್ಲಿ ಮಹಿಳೆಯೊಬ್ಬರು ಚಲಿಸುತ್ತಿರುವ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ಆದರೆ ಆ ಮಹಿಳೆಯ ಉದ್ದೇಶವನ್ನು ಇಬ್ಬರು ಸಾಹಸಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ವಿಫಲಗೊಳಿಸಿದ್ದಾರೆ. ವಿಕ್ರೋಲಿ ನಿಲ್ದಾಣದಿಂದ ಲೋಕಲ್ ರೈಲು ಆಗ ತಾನೆ ಚಲಿಸತೊಡಗಿತ್ತು. ಪ್ಲಾಟ್‌ಫಾರಂನಲ್ಲಿದ್ದ ಮಹಿಳೆಯೊಬ್ಬರು ಹಠಾತ್ತಾಗಿ ರೈಲು ಪಟ್ಟಿಗೆ ಹಾರಿದ್ದಲ್ಲದೆ ರೈಲು ಬರುತ್ತಿದ್ದ ಕಡೆಗೆ ನಡೆಯ ತೊಡಗಿದ್ದರು. ಇದನ್ನೆಲ್ಲ ನೋಡುತ್ತಾ ನಿಂತಿದ್ದ ಅಲ್ಲಿದ್ದ ಪ್ರಯಾಣಿಕರು ಪಟ್ಟಿಯಿಂದ ಆಚೆ ಸರಿಯುವಂತೆ ಮಹಿಳೆಗೆ ಕೂಗಿ ಹೇಳುತ್ತಿದ್ದರು ಆ ಮಹಿಳೆ ಯಾರ ಮಾತಿಗೂ ಕಿವಿಗೊಡಲಿಲ್ಲ. ಆದರೆ, ಅಲ್ಲಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ರೈಲು ಪಟ್ಟಿಗೆ ಜಿಗಿದು, ಮಹಿಳೆಯನ್ನು ಅದರಿಂದ ಆಚೆ ಎಳೆದು ಹಾಕಿ ರಕ್ಷಿಸಿದ್ದಾರೆ ಎಂದು ವರದಿ ತಿಳಿಸಿದೆ.
ನಾಝಿಯಾ ಸೈಯ್ಯದ್(40) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯಾಗಿದ್ದು, ಕೌಟುಂಬಿಕ ಸಮಸ್ಯೆಯಿಂದ ನೊಂದು ಹೀಗೆ ಮಾಡಿದೆ ಎಂದಿದ್ದಾರೆ. ಆದರೆ, ಮಹಿಳೆಯನ್ನು ಪತಿ ತಲಾಖ್ ನೀಡಿದ್ದು ಅವರ ಆತ್ಮಹತ್ಯೆ ಯತ್ನಕ್ಕೆ ಕಾರಣ ಎನ್ನಲಾಗಿದೆ. ಜೀವವವನ್ನು ಪಣವಾಗಿಟ್ಟು ಮಹಿಳೆಂನ್ನು ರಕ್ಷಿಸಿ ಸಾಹಸ ಮೆರೆದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಮಹಿಳೆ ರೈಲು ಪಟ್ಟಿಯಲ್ಲಿದ್ದುದನ್ನು ಗಮನಿಸಿ ಎಮರ್ಜೆನ್ಸಿ ಬ್ರೇಕ್ ಹಾಕುವ ಮೂಲಕ ರೈಲು ನಿಲ್ಲಿಸಲು ಶ್ರಮಿಸಿದ ರೈಲಿನ ಚಾಲಕನನ್ನು ಸಾರ್ವಜನಿಕರು ಅಭಿನಂದಿಸಿದ್ದಾರೆಂದು ವರದಿ ತಿಳಿಸಿದೆ.







