ದಿಲ್ಲಿಯಲ್ಲಿ 2000 ಸಿಸಿ ಮತ್ತು ಅಧಿಕ ಸಾಮರ್ಥ್ಯದ ಡೀಸೆಲ್ ವಾಹನಗಳ ಮೇಲಿನ ನಿಷೇಧ ಹಿಂದೆಗೆದ ಸುಪ್ರೀಂ ಕೋರ್ಟ್
ಶೇ.1ರಷ್ಟು ಹಸಿರು ಸೆಸ್ ಹೇರಿಕೆ

ಹೊಸದಿಲ್ಲಿ,ಆ.12: ದಿಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್‌ಸಿಆರ್)ದಲ್ಲಿ 2000 ಸಿಸಿ ಮತ್ತು ಅಧಿಕ ಸಾಮರ್ಥ್ಯದ ಡೀಸೆಲ್ ವಾಹನಗಳು ಮತ್ತು ಎಸ್‌ಯುವಿಗಳ ನೋಂದಾವಣೆಯ ಮೇಲೆ ತಾನು ಹೇರಿದ್ದ ನಿರ್ಬಂಧವನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಹಿಂದೆಗೆದುಕೊಂಡಿದೆ. ಇದೇ ವೇಳೆ ಇಂತಹ ವಾಹನಗಳ ಶೋರೂಮ್ ವೌಲ್ಯದ ಶೇ.1ರಷ್ಟನ್ನು ಹಸಿರು ಮೇಲ್ತೆರಿಗೆಯಾಗಿ ಪಾವತಿಸುವಂತೆ ಅದು ಆದೇಶಿಸಿದೆ.
ಪರಿಸರ ರಕ್ಷಣೆ ಶುಲ್ಕವಾಗಿ ಸಂಗ್ರಹಿಸಲಾಗುವ ಈ ಶೇ.1ರಷ್ಟು ಹಣವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಸ್ತಾಂತರಿಸುವಂತೆ ಅದು ನಿರ್ದೇಶ ನೀಡಿತಲ್ಲದೆ, ಇದಕ್ಕಾಗಿ ಸರಕಾರಿ ಸ್ವಾಮ್ಯದ ಬ್ಯಾಂಕೊಂದರಲ್ಲಿ ಪ್ರತ್ಯೇಕ ಖಾತೆಯನ್ನು ತೆರೆಯುವಂತೆ ಮಂಡಳಿಗೆ ಸೂಚಿಸಿತು.
ಪ್ರಮುಖ ವಾಹನ ತಯಾರಿಕೆ ಕಂಪನಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದ ಶ್ರೇಷ್ಠ ನ್ಯಾಯಾಧೀಶ ಟಿ.ಎಸ್.ಠಾಕೂರ್ ನೇತೃತ್ವದ ಪೀಠವು ತನ್ನ 2015,ಡಿ.16ರ ಆದೇಶವನ್ನು ಪರಿಷ್ಕರಿಸಿ ಹೊಸ ಆದೇಶವನ್ನು ಹೊರಡಿಸಿತು.
2000 ಸಿಸಿಗಿಂತ ಕಡಿಮೆ ಇಂಜಿನ್ ಸಾಮರ್ಥ್ಯದ ಡೀಸೆಲ್ ವಾಹನಗಳ ಮೇಲೂ ಶೇ.1 ಹಸಿರು ಮೇಲ್ತೆರಿಗೆಯನ್ನು ಹೇರಬಹುದೇ ಎನ್ನುವುದನ್ನು ತಾನು ನಂತರ ನಿರ್ಧರಿಸುವುದಾಗಿ ಪೀಠವು ತಿಳಿಸಿತು.





