ಡಿ.ಎಚ್.ಶಂಕರಮೂರ್ತಿ ರಾಜ್ಯಪಾಲರಾಗಿ ನೇಮಕ

ಬೆಂಗಳೂರು, ಆ. 12: ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ತಮಿಳುನಾಡು ಅಥವಾ ತೆಲಂಗಾಣದ ನೂತನ ರಾಜ್ಯಪಾಲರಾಗಿ ನೇಮಕ ಮಾಡಲು ಬಿಜೆಪಿ ರಾಷ್ಟ್ರೀಯ ಮುಖಂಡರು ತೀರ್ಮಾನಿಸಿದ್ದಾರೆ.
ಕೆಲ ದಿನಗಳ ಹಿಂದೆಯೆಷ್ಟೇ ಹೊಸದಿಲ್ಲಿಗೆ ಭೇಟಿ ನೀಡಿದ್ದ ಶಂಕರ ಮೂರ್ತಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೊಂದಿಗೆ ಸಮಾಲೋಚನೆ ನಡೆಸಿದ್ದು. ರಾಜ್ಯಪಾಲರಾಗಲು ಶಂಕರಮೂರ್ತಿ ಅವರು ಸಮ್ಮತಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲೆ ಡಿ.ಎಚ್.ಶಂಕರಮೂರ್ತಿ ರಾಜ್ಯಪಾಲರಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಆಗ ಅದು ಕಾರ್ಯಗತವಾಗಿರಲಿಲ್ಲ. ಇದೀಗ ಕಾಲಕೂಡಿ ಬಂದಿದೆ. ಶಂಕರಮೂರ್ತಿ ರಾಜ್ಯಪಾಲ ಹುದ್ದೆ ಅಲಂಕರಿಸುವುದು ಬಹುತೇಕ ಖಚಿತವಾಗಿದ್ದು ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.
ತಮಿಳುನಾಡು ರಾಜ್ಯಪಾಲರಾಗಿರುವ ಕೆ.ರೋಸಯ್ಯ ಅವರು ಆ.31ಕ್ಕೆ ನಿವೃತ್ತಿ ಆಗಲಿದ್ದಾರೆ. ಹೀಗಾಗಿ ತಮಿಳುನಾಡು ಅಥವಾ ನೂತನವಾಗಿ ರಚನೆಯಾಗಿರುವ ತೆಲಂಗಾಣ ರಾಜ್ಯಪಾಲರಾಗಿ ನಿಯೋಜನೆಗೊಳ್ಳುವ ಸಾಧ್ಯತೆಗಳಿವೆ.
ವರಿಷ್ಟರಿಗೆ ಬಿಟ್ಟದ್ದು: ರಾಜ್ಯಪಾಲರ ಹುದ್ದೆಗೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷರು ನನ್ನ ಒಪ್ಪಿಗೆ ಕೇಳಿದ್ದು, ತಾನು ಸಮ್ಮತಿಸಿದ್ದೇನೆ. ರಾಜ್ಯಪಾಲರಾಗಿ ತನ್ನನ್ನು ನಿಯೋಜಿಸಿರುವುದು ಪಕ್ಷದ ವರಿಷ್ಟರಿಗೆ ಬಿಟ್ಟ ವಿಚಾರ, ಪಕ್ಷದ ತೀರ್ಮಾನಕ್ಕೆ ತಾನು ಬದ್ಧ ಎಂದು ಸಭಾಪತಿ ಶಂಕರಮೂರ್ತಿ ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.





