ಹಾಲು ಕರೆದ ಸಚಿವ ಎ. ಮಂಜು
ಸರಕಾರದ ಹೊಸ ಯೋಜನೆ

ಬೆಂಗಳೂರು, ಆ. 10: ಡೆಂಗ್ ಸೇರಿದಂತೆ ಇತರ ಮಾರಕ ಕಾಯಿಲೆಗಳಿಗೆ ಪರಿಣಾಮಕಾರಿಯಾದ ಮೇಕೆ ಹಾಲಿನ ಮಾರುಕಟ್ಟೆ ವಿಸ್ತರಣೆಗೆ ಯೋಜನೆ ರೂಪಿಸಲಾಗಿದೆೆ ಎಂದು ಪಶುಸಂಗೋಪನ ಸಚಿವ ಎ.ಮಂಜು ತಿಳಿಸಿದ್ದಾರೆ.
ಶುಕ್ರವಾರ ನಗರದ ಲಾಲ್‌ಬಾಗ್‌ನಲ್ಲಿರುವ ಎಂ.ಎಚ್.ಮರಿಗೌಡ ಸಭಾಂಗಣದಲ್ಲಿ ಆಯೋಜಿಸಿದ್ದ ಯಶೋದವನ ಗೋಟ್ ಫಾರ್ಮ್‌ನ ‘ಮೈ ಗೋಟ್’ ಬ್ರಾಂಡ್ ಮೇಕೆ ಹಾಲನ್ನು ಕುಡಿಯುವ ಮೂಲಕ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮಾತನಾಡಿದರು.
ಮೇಕೆ ಹಾಲು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವುದಲ್ಲದೆ, ಮಕ್ಕಳ ಆರೋಗ್ಯಕ್ಕೂ ಪೂರಕವಾಗಿದೆ. ಮೇಕೆ ಹಾಲು ತಾಯಿ ಎದೆ ಹಾಲಿಗಿಂತಲೂ ಶ್ರೇಷ್ಠವಾದದ್ದು. ಅಲ್ಲದೆ, ಅನೇಕ ಪೌಷ್ಠಿಕಾಂಶಗಳನದ್ನು ಒಳಗೊಂಡಿರುವುದರಿಂದ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಮೇಕೆ ಹಾಲಿಗೆ ಮಾರುಕಟ್ಟೆ ಒದಗಿಸಲು ಸರಕಾರ ಯೋಜನೆ ರೂಪಿಸಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಜನರನ್ನು ಕಾಡುತ್ತಿರುವ ಡೆಂಗ್ ಜ್ವರ ಸೇರಿದಂತೆ ಇತರ ಮಾರಕ ಕಾಯಿಲೆಗಳಿಗೆ ಮೇಕೆ ಹಾಲು ಉಪಯುಕ್ತವಾದದ್ದು ಎಂದು ವೈದ್ಯರೂ ತಿಳಿಸಿದ್ದಾರೆ. ಹೀಗಾಗಿ ಮೇಕೆ ಹಾಲಿಗೆ ಸೂಕ್ತ ಮಾರುಕಟ್ಟೆ ವಿಸ್ತರಿಸುವ ಅಗತ್ಯತೆ ಇದೆ ಎಂದು ಸಚಿವರು ಅಭಿಪ್ರಾಯಿಸಿದರು.
ಯಶೋದವನ ಫಾರ್ಮ್‌ನ ಮಾಲಕ ಶ್ರೀನಿವಾಸ ಮಾತನಾಡಿ, ಮೇಕೆ ಹಾಲಿನ ಬಳಕೆಯಿಂದ ಸಾಕಷ್ಟು ಲಾಭಗಳಿವೆ. ಸಾಕಷ್ಟು ಔಷಧೀಯ ಗುಣಗಳಿರುವ ಮೇಕೆ ಹಾಲು ಮಕ್ಕಳ ಆರೋಗ್ಯಕ್ಕೆ ಪೂರಕವಾದದ್ದು. ಆದರೆ ಗ್ರಾಹಕರಿಗೆ ಸಲೀಸಾಗಿ ಸಿಗುತ್ತಿರಲಿಲ್ಲ. ಹಸುವಿನ ಹಾಲಿನಂತೆ ಮೇಕೆ ಹಾಲು ಮಾರುಕಟ್ಟೆಯಲ್ಲಿ ವ್ಯವಸ್ಥಿತವಾಗಿ ದೊರೆಯಬೇಕು ಎಂಬ ಮಹದಾಸೆಯಿಂದ ಈ ಪ್ರಯತ್ನಕ್ಕೆ ಕೈ ಹಾಕಿದ್ದೇನೆ ಎಂದು ತಿಳಿಸಿದರು.
ಸಾಮಾನ್ಯವಾಗಿ ಮೇಕೆ ವರ್ಷಕ್ಕೆ ಎರಡು ಬಾರಿ ಮರಿ ಹಾಕುತ್ತದೆ, ಹೀಗಾಗಿ ಮೇಕೆ ಹಾಲನ್ನು ಸೀಸನಲ್ ಮಿಲ್ಕ್ ಎನ್ನಬಹುದು. ಮೇಕೆ ತನ್ನ ಮರಿಗಳಿಗೆ ಹಾಲುಣಿಸಿ ಉಳಿದ ಹೆಚ್ಚುವರಿ ಹಾಲನ್ನು ಮಾರುಕಟ್ಟೆಗೆ ಪೂರೈಸಲಾಗುವುದು. ಇದಕ್ಕಾಗಿ ಒಂದು ವರ್ಷ ನಿರಂತರ ಸಂಶೋಧನೆ ಕೈಗೊಂಡು ಯಶಸ್ವಿಯಾಗಿದ್ದೇವೆ ಎಂದರು.
ಉತ್ತಮ ತಳಿಯ ಮೇಕೆಯ ಹಾಲನ್ನು ಮಾರುಕಟ್ಟೆಗೆ ತರುವ ಮುನ್ನ ಜನರಲ್ಲಿ ಮೇಕೆ ಹಾಲಿನ ಕುರಿತು ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಒಂದು ಸಾವಿರ ಲೀ. ಮೇಕೆ ಹಾಲನ್ನು ಸುಮಾರು ಆರು ಸಾವಿರ ಜನರಿಗೆ ಉಚಿತವಾಗಿ ಎರಡು ತಿಂಗಳು ಹಂಚಿದ್ದೇವೆ. ಜನರಿಂದ ಕೂಡ ನಮ್ಮ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.
ಮೇಕೆ ಹಾಲಿಗೆ ಬೇಡಿಕೆ ಇಟ್ಟು ಈವರೆಗೆ ಸುಮಾರು ಮೂರು ಸಾವಿರಕ್ಕೂ ಅಧಿಕ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ದಿನಕ್ಕೆ ಒಂದು ಸಾವಿರ ಮೇಕೆ ಹಾಲು ಉತ್ಪಾದನೆ ಮಾಡಿದವರಲ್ಲಿ ದೇಶದಲ್ಲಿ ನಾವೇ ಮೊದಲು. ಮೇಕೆ ಹಾಲನ್ನು ಪ್ಯಾಶ್ಚೀಕರಿಸಿ ಗುಣಮಟ್ಟದ ಹಾಲನ್ನು ಗ್ರಾಹಕರಿಗೆ ಒದಗಿಸಲಾಗುತ್ತದೆ ಎಂದರು.
ಪ್ರಾರಂಭಿಕವಾಗಿ ಬೆಂಗಳೂರು ಮತ್ತು ಮೈಸೂರು ನಗರದಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಪ್ರಯತ್ನಕ್ಕೆ ಜನರಿಂದ ಸೂಕ್ತ ಬೆಂಬಲ ದೊರೆತರೆ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಸಂತಸ ಹಂಚಿಕೊಂಡ ಅವರು, ಮೇಕೆ ಹಾಲು ಬಾಟಲ್ ರೂಪದಲ್ಲಿ ದೊರಕಲಿದ್ದು, 200 ಮಿ.ಲೀ. ಬಾಟಲ್‌ಗೆ 50 ರೂ, 500 ಮಿ.ಲೀ.ಗೆ 125 ರೂ., ಒಂದು ಲೀ.ಗೆ 250 ರೂ.ಗಳಂತೆ ಮಾರಾಟ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವ್ಯವಸ್ತಾಪಕ ನಿರ್ದೇಶಕ ಡಾ.ಶಿವರಾಂ ಭಟ್, ರಾಜಸ್ಥಾನದ ಆಡು ಸಾಕಣಿಕೆ ತಜ್ಞ ದೀಪಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







