‘ಸಾಮಾಜಿಕ ಬದ್ಧತೆ ಉನ್ನತ ವ್ಯಕ್ತಿತ್ವಕ್ಕೆ ಮೂಲ’
ಅಭಿನಂದನಾ ಕಾರ್ಯಕ್ರಮ
ಶಿವಮೊಗ್ಗ, ಆ. 12: ಜನರ ನೋವು, ನಲಿವು, ಸಂಕಷ್ಟಗಳಿಗೆ ಸ್ಪಂದಿಸಿ, ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುವ ಸಾಮಾಜಿಕ ಬದ್ಧತೆಯೇ ವ್ಯಕ್ತಿಯ ಉನ್ನತ ವ್ಯಕ್ತಿತ್ವಕ್ಕೆ ಮೂಲ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಜೋಗನ್ ಶಂಕರ್ ಹೇಳಿದರು.
ಶಂಕರಘಟ್ಟದ ಕುವೆಂಪು ವಿವಿಯಲ್ಲಿ ಕನ್ನಡ ಭಾರತಿ ವಿಭಾಗವು ಏರ್ಪಡಿಸಿದ್ದ ಪ್ರೊ. ಸಣ್ಣರಾಮ: ಸಾರ್ಥಕ ಬದುಕು, ಅವಲೋಕನ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಣ್ಣರಾಮ ಅವರ ಸಾಮಾಜಿಕ ಬದ್ಧತೆ, ಹಸಿವಿನ ಅನುಭವ ಅವರ ಸಾಧನೆಗೆ ಮೆಟ್ಟಿಲುಗಳಾಗಿವೆ. ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟಗಾರರಾಗಿ, ಉತ್ತಮ ಅಧ್ಯಾಪಕರಾಗಿ, ಸಾಂಸ್ಕೃತಿಕ ಚಿಂತಕರಾಗಿ, ಕತೆಗಾರರಾಗಿ ಅವರು ರೂಪುಗೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಜಾನಪದ ತಜ್ಞ ಪ್ರೊ.ತೀ.ನಂ. ಶಂಕರನಾರಾಯಣ ಮಾತನಾಡಿ, ಪ್ರೀತಿ, -ವಿಶ್ವಾಸಗಳಿಂದ ಜೀವನ ನಿರ್ವಹಿಸಿದಾಗ ಒತ್ತಡ ಮುಕ್ತರಾಗಲು ಸಾಧ್ಯ. ಮನಸ್ಸುಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಎಲ್ಲ ಅನುಕೂಲವಿದ್ದಾಗ ಅಸೂಯೆಯಿಂದ ಬದುಕುವುದು ಸರಿಯಲ್ಲ. ಸಣ್ಣತನಗಳಿಂದ ಹೊರಬರಬೇಕು. ದೌರ್ಬಲ್ಯ ಮೀರಿ ಬದುಕಬೇಕು. ಸಣ್ಣರಾಮ ಅವರು ಶ್ರದ್ಧಾವಂತರಾಗಿದ್ದವರು. ಸರಳತೆ, ಸೌಜನ್ಯ ಮೈಗೂಡಿಸಿಕೊಂಡಿದ್ದರು ಎಂದರು.
ಡಾ. ಸಣ್ಣರಾಮ ಅವರ ಚಳವಳಿ ಬದುಕನ್ನು ಕುರಿತು ಮಾತನಾಡಿದ ದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಸಲುವಾಗಿ ಸಣ್ಣರಾಮ ಅವರು ಅವಿರತವಾಗಿ ಹೋರಾಡಿದರು. ಬಡವರ ಏಳಿಗೆಗೆ ತಮ್ಮದೇ ಆದ ಅಪೂರ್ವ ಸೇವೆ ಸಲ್ಲಿಸಿದ್ದಾರೆ ಎಂದರು.
ಡಾ. ಸಣ್ಣರಾಮ ಅವರ ಸಾಹಿತ್ಯ ಕುರಿತು ಡಾ. ಎಚ್.ಟಿ. ಕೃಷ್ಣಮೂರ್ತಿ ಮಾತನಾಡಿದರು. ಕುಲಸಚಿವ ಪ್ರೊ. ಜಿ.ಸೋಮಶೇಖರ್ ಗೌರವ ಸಮರ್ಪಿಸಿದರು. ಅಭಿನಂದನಾ ಗ್ರಂಥ ಬೇರು ಬೆಳಕು ಬಿಡುಗಡೆಗೊಳಿಸಲಾಯಿತು. ಕನ್ನಡಭಾರತಿ ನಿರ್ದೇಶಕ ಪ್ರೊ.ಪ್ರಶಾಂತನಾಯಕ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾಂಗ ಕುಲಸಚಿವ ಪ್ರೊ. ಸಿ. ಎಂ. ತ್ಯಾಗರಾಜ್, ಕನ್ನಡ ಭಾರತಿ ಪ್ರಾಧ್ಯಾಪಕ ಡಾ. ಕುಮಾರಚಲ್ಯ, ಡಾ. ಕೇಶವಶರ್ಮ, ಡಾ. ಶಿವಾನಂದ ಕೆಳಗಿನಮನಿ, ಡಾ. ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಮಾತನಾಡಿದರು. ಧರ್ಮಪ್ಪ ಪ್ರಾರ್ಥಿಸಿದರು. ಪುರುಷೋತ್ತಮ ಕಾರ್ಯಕ್ರಮ ನಿರೂಪಿಸಿದರು.







