ಕೇಂದ್ರದಿಂದ ಬಿಡುಗಡೆಯಾಗದ ಹಣ
ಉದ್ಯೋಗಖಾತರಿ ಯೋಜನೆ
ಸಾಗರ,ಆ.12: ಉದ್ಯೋಗಖಾತರಿ ಯೋಜನೆಯ ಜೊತೆಗೆ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆ ಆ.13ರಂದು ಶಿವಮೊಗ್ಗದಲ್ಲಿ ಸಂಸದರಾದ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಉದ್ಯೋಗಖಾತರಿ ಯೋಜನೆಯಡಿ ಹಣ ಬಿಡುಗಡೆಯಾಗದಿರುವ ಕುರಿತು ಸಂಸದರ ಗಮನ ಸೆಳೆಯಲಾಗುತ್ತದೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.
ಇಲ್ಲಿನ ತಾಪಂ ಸಾಮರ್ಥ್ಯಸೌಧದಲ್ಲಿ ಶುಕ್ರವಾರ ಉದ್ಯೋಗಖಾತರಿ ಯೋಜನೆ ಪ್ರಗತಿ ಪರಿಶೀಲನೆಗೆ ಸಂಬಂಧಪಟ್ಟಂತೆ ಪಂಚಾಯತ್ ಅಭಿವೃದ್ಧ್ದಿಗಳ ಸಭೆ ನಡೆಸಿ ಮಾತನಾಡಿದ ಅವರು, ಕಳೆದ ಮೂರು ತಿಂಗಳಿನಿಂದ ಜಾಬ್‌ಕಾರ್ಡ್‌ದಾರರಿಗೆ ಹಣ ಬಿಡುಗಡೆಯಾಗಿಲ್ಲ. ಇದರಿಂದ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಉದ್ಯೋಗಖಾತರಿಯಡಿ ಕೆಲಸ ಮಾಡಿದ ಬಾಬ್ತು 8 ಕೋಟಿ ರೂ. ಬಿಡುಗಡೆಯಾಗಬೇಕು. ಸಾಗರ ತಾಲೂಕೊಂದರಲ್ಲೇ ಸುಮಾರು 1.50 ಕೋಟಿ ರೂ. ಕಾರ್ಮಿಕರ ವೇತನ ಬಾಕಿ ಇದೆ. ಇಷ್ಟೊಂದು ವಿಳಂಬ ಯಾವತ್ತೂ ಆಗಿರಲಿಲ್ಲ. ಹಣ ಬಿಡುಗಡೆ ವಿಳಂಬವಾಗುತ್ತಿರುವುದು ನೋಡಿದರೆ ಉದ್ಯೋಗಖಾತ್ರಿ ಯೋಜನೆ ಅನುಷ್ಠಾನದಲ್ಲಿ ಕೇಂದ್ರ ಸರಕಾರಕ್ಕೆ ಇರುವ ಕಾಳಜಿ ಎಂತಹದ್ದು ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಟೀಕಿಸಿದರು. ಉದ್ಯೋಗಖಾತರಿ ಕಾಯ್ದೆ ಪ್ರಕಾರ ಕಾರ್ಮಿಕರಿಗೆ ಹಣ ನೀಡಲು ವಿಳಂಬವಾದರೆ ಸರಕಾರವೇ ದಂಡ ಭರಿಸಬೇಕಾಗುತ್ತದೆ. ಖಾತ್ರಿ ಕೆಲಸ ಮಾಡುವವರು ಬಡವರಾಗಿದ್ದು, ಅವರು ಕೆಲಸ ಮಾಡಿದ್ದಕ್ಕೆ ಕೂಲಿ ಸಿಗದೆ ಹೋದರೆ ಅವರ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ. ತಾಲೂಕಿನ ಅನೇಕ ಗ್ರಾಪಂಗಳಲ್ಲಿ ಕೆಲಸಗಾರರು ಬಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು. ನಮ್ಮ ತಾಲೂಕು ವ್ಯಾಪ್ತಿಯಲ್ಲಿ 30 ಕೋಟಿ ರೂ. ಟಾರ್ಗೆಟ್ ಇರಿಸಿಕೊಳ್ಳಲಾಗಿದೆ. ಪ್ರತೀ ಗ್ರಾಮ ಪಂಚಾಯತ್‌ನಲ್ಲಿ 1 ಕೋಟಿ ರೂ. ಖರ್ಚು ಮಾಡಬೇಕು. ವೈಯಕ್ತಿಕ ಕಾಮಗಾರಿ ಹಾಗೂ ಹೊಸ ಅಡಿಕೆ ತೋಟಗಳನ್ನು ನಿರ್ಮಿಸಲು ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಉದ್ಯೋಗಖಾತರಿ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸದ ಪಂಚಾಯತ್ ಅಭಿವೃದ್ಧ್ದಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಸಿದ್ದಲಿಂಗಯ್ಯ, ಉದ್ಯೋಗಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಪ್ರಶಾಂತ್ ಉಪಸ್ಥಿತರಿದ್ದರು.





