ಹಳ್ಳಿಗಳ ಪ್ರಗತಿಗೆ ಗ್ರಾಮಸ್ಥರಿಂದ ಸಲಹೆ: ಜಿಪಂ ಸಿಇಒ
ನಮ್ಮ ಗ್ರಾಮ ನಮ್ಮ ಯೋಜನೆ ಪ್ರಕ್ರಿಯೆ ಆರಂಭ
ಮಡಿಕೇರಿ, ಆ.12: ಗ್ರಾಮ ಸ್ವರಾಜ್ ವಿಧೇಯಕದಡಿ ಹಳ್ಳಿಗಳ ಪ್ರಗತಿಗಾಗಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರಿಂದ ಸಲಹೆ ಸ್ವೀಕರಿಸಿ ಅದನ್ನು ಅಂಗೀಕರಿಸುವ ಭವಿಷ್ಯದ ಯೋಜನೆ ‘ನಮ್ಮ ಗ್ರಾಮ, ನಮ್ಮ ಯೋಜನೆ’ಯ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದು ಗ್ರಾಮೀಣಾಭಿವೃದ್ಧ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಅನುಷ್ಠಾನಗೊಳಿಸುತ್ತಿರುವ ವಿಶಿಷ್ಟ ಯೋಜನೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ. ನಮ್ಮ ಹಳ್ಳಿ ಹೇಗಿರಬೇಕು, ಹೇಗೆ ಪ್ರಗತಿ ಹೊಂದಬೇಕು ಎನ್ನುವ ಪ್ರಸ್ತಾವನೆಯನ್ನು ಸ್ಥಳೀಯರಿಂದಲೇ ಪಡೆದುಕೊಂಡು ಮುಂದುವರಿಯುವುದು ಇದರ ವಿಶೇಷವಾಗಿದೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ 104 ಗ್ರಾಮ ಪಂಚಾಯತ್‌ಗಳು ಈಗಾಗಲೇ ಈ ಪ್ರಕ್ರಿಯೆಯಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಿವೆ.
ಇತ್ತೀಚೆಗೆ ಗ್ರಾಮೀಣಾಭಿವೃದ್ಧ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಎಚ್.ಕೆ.ಪಾಟೀಲ್ ಅವರು ತಿಳಿಸಿದಂತೆ ಕ್ವಿಟ್ ಇಂಡಿಯಾ ಚಳವಳಿ ಹಾಗೂ ರಾಜೀವ್‌ಗಾಂಧಿ ಜನ್ಮ ದಿನ ಪ್ರಯುಕ್ತ ನಡೆಸುವ ಸದ್ಭಾವನ ದಿನದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ತರಲಾಗುತ್ತಿದೆ ಎಂದು ಪ್ರಸ್ತಾಪಿಸಿದ್ದಾರೆ. ಜಿಲ್ಲೆಯ 104 ಗ್ರಾಮ ಪಂಚಾಯತ್‌ಗಳಿಂದ ಬರುವ ‘ನಮ್ಮ ಗ್ರಾಮ ನಮ್ಮ ಯೋಜನೆ’ಯ ಪ್ರಸ್ತಾವನೆಯನ್ನು ಪಂಚತಂತ್ರ ತಂತ್ರಾಂಶದ ಮೂಲಕ ಆ.19 ರಂದು ಇಲಾಖಾ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು.ಬಳಿಕ ಸದ್ಭಾವನ ದಿನವಾದ ಆ.20 ರಂದು ಈ ಕುರಿತು ದಾಖಲೆ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು. ಹಂತ ಹಂತವಾಗಿ ಈ ಯೋಜನೆ ಜಾರಿಯಾಗಲಿದ್ದು, ಇದರ ಮೇಲುಸ್ತುವಾರಿಯನ್ನು ಸಂಬಂಧಪಟ್ಟ ಪಂಚಾಯತ್ ಅಧಿಕಾರಿಗಳು ವಹಿಸಿಕೊಳ್ಳಲಿದ್ದಾರೆ ಎಂದು ಚಾರುಲತಾ ಸೋಮಲ್ ತಿಳಿಸಿದರು.
ಅಪ್‌ಲೋಡ್ ಮಾಡಲು ಈಗಾಗಲೇ ನೂತನ ವೆಬ್‌ಸೈಟ್‌ನ್ನು ತೆರೆಯಲಾಗಿದ್ದು, ಈ ಸಂಬಂಧವಾಗಿ 104 ಗ್ರಾಮ ಪಂಚಾಯತ್‌ಗಳ ಅಭಿವೃದ್ಧ್ದಿ ಅಧಿಕಾರಿಗಳಿಗೆ ಈ ಬಗ್ಗೆ ಪಂಚತಂತ್ರ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.







