‘ರಾಜ್ಯದ ಪ್ರಗತಿಗೆ ಅರಸು ಕೊಡುಗೆ ಅಪಾರ’
ಮಡಿಕೇರಿ, ಆ.12: ರಾಜ್ಯದ ಪ್ರಗತಿಗೆ ಡಿ.ದೇವರಾಜ ಅರಸು ಅವರ ಕೊಡುಗೆ ಅಪಾರ. ಇವರು ಸಮಾಜದ ಕೆಳಹಂತದ ಜನರ ಕಣ್ಣೀರು ಒರೆಸಿದ ನೇತಾರ, ಅಪ್ರತಿಮ ಸಂಘಟನಾ ಚತುರ, ಕರ್ನಾಟಕದ ನಿರ್ಮಾತೃ, ಸಾಮಾಜಿಕ ಸುಧಾರಣೆಯ ಹರಿಕಾರ ಎಂದು ಡಿ.ದೇವರಾಜ ಅರಸು ಶತಮಾನೋತ್ಸವ ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಹಾಗೂ ಮಾಜಿ ಶಾಸಕ ಬಸವರಾಜು ಬಣ್ಣಿಸಿದರು. ಜಿಲ್ಲಾಡಳಿತ, ಜಿಪಂ ಮತ್ತು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮ ಶತಮಾನೋತ್ಸವ ಅಂಗವಾಗಿ ಗುರುವಾರ ಡಿ.ದೇವರಾಜ ಅರಸು ಸ್ತಬ್ಧಚಿತ್ರ ಬರಮಾಡಿಕೊಂಡು ಅವರು ಮಾತನಾಡಿದರು.
ಡಿ.ದೇವರಾಜ ಅರಸು ಅವರಿಗೆ ಜನರ ಬಗ್ಗೆ ಇದ್ದ ಕಳಕಳಿ ಅಗಾಧವಾದದ್ದು ಇವರು ರಾಜ್ಯವಷ್ಟೇ ಅಲ್ಲ, ರಾಷ್ಟ್ರಕಂಡ ಮಹಾನ್ ಮುತ್ಸದ್ಧಿ. ಸಮಾಜದ ಹಿಂದುಳಿದ ಹಾಗೂ ಬಡವರನ್ನು ಜಾಗೃತಗೊಳಿಸಲು ಪ್ರಯತ್ನಿಸಿದರು. ಉಳುವವನೇ ಭೂಮಿಯ ಒಡೆಯ, ಮಲ ಹೊರುವ ಪದ್ಧತಿ ನಿಷೇಧ, ಜೀತ ಪದ್ಧತಿ ನಿರ್ಮೂಲನೆ, ವಿದ್ಯಾರ್ಥಿ ನಿಲಯಗಳ ಆರಂಭ ಹೀಗೆ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ಡಿ.ದೇವರಾಜ ಅರಸು ಅವರು ಅಸಾಧ್ಯವಾದ ಸಾಧನೆಗಳನ್ನು ವೌನವಾಗಿ,ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ವೌನಕ್ರಾಂತಿಯ ಹರಿಕಾರರಾಗಿದ್ದರು. 1969 ರಿಂದ 79ರ ದಶಕವನ್ನು ಅರಸು ಯುಗವೆಂದೇ ಬಣ್ಣಿಸಬಹುದು ಎಂದರು.
ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಬಂದ ಅರಸು ಅವರು,ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಭೂ ರಹಿತ ಕುಟುಂಬಗಳಿಗೆ ಭೂಮಿಯನ್ನು ಒದಗಿಸಲು ಶ್ರಮಿಸಿದರು ಎಂದರು. ಕಾರ್ಯಕ್ರಮಕ್ಕೂ ಮೊದಲು ಸಂಪಾಜೆಯಲ್ಲಿ ಅರಸು ಅವರ ಸ್ತಬ್ಧಚಿತ್ರವನ್ನು ಡಿ.ದೇವರಾಜ ಅರಸು ಶತಮಾನೋತ್ಸವ ಸಮಿತಿ ಕೊಡಗು ಜಿಲ್ಲಾ ಸಂಚಾಲಕರಾದ ಬಸವರಾಜು, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಸಂಪಾಜೆ ಗ್ರಾಪಂ ಅಧ್ಯಕ್ಷರಾದ ಬಾಲಚಂದ್ರ ಕಳಗಿ, ಬಿಸಿಎಂ ಇಲಾಖಾ ಅಧಿಕಾರಿ ಕೆ.ವಿ.ಸುರೇಶ್, ಮಡಿಕೇರಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಜಿಪಂ ಅಧ್ಯಕ್ಷರಾದ ಬಿ.ಎ.ಹರೀಶ್, ಪ್ರಮುಖರಾದ ಟಿ.ಪಿ.ರಮೇಶ್ ಮತ್ತಿತರರು ಪುಷ್ಪಾರ್ಚನೆ ಮಾಡಿ ಸ್ತಬ್ಧ ಚಿತ್ರವನ್ನು ಬರಮಾಡಿಕೊಂಡರು. ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕ್ರಾಂತಿಗೀತೆ ಗಾಯನ ಕಾರ್ಯಕ್ರಮ ನಡೆಯಿತು. ಜಿಪಂ ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಟಿ.ಪಿ.ರಮೇಶ್, ತಾಪಂ ಅಧ್ಯಕ್ಷರಾದ ತೆಕ್ಕಡೆ ಶೋಭಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಬಿ.ಸಿ.ಎಂ.ಇಲಾಖಾ ಧಿಕಾರಿ ಕೆ.ವಿ.ಸುರೇಶ್, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ.ಜಗನ್ನಾಥ್ ಮತ್ತಿತರರು ಉಪಸ್ಥಿತರಿದ್ದರು.







