ಹೊಸ ಪಡಿತರ ವ್ಯವಸ್ಥೆ ಹಿಂಪಡೆಯಲು ಆಗ್ರಹ

ಹೊನ್ನಾವರ, ಆ.12: ಬಿಪಿಎಲ್ ಕಾರ್ಡುದಾರರು ಬೆರಳಚ್ಚು ನೀಡಿ ಪಡಿತರ ಚೀಟಿ ಪಡೆಯುವ ವ್ಯವಸ್ಥೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಹೊನ್ನಾವರ ತಹಶೀಲ್ದಾರ್ ಜಿ.ಎಂ.ಬೋರ್ಕರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ನೂತನ ವ್ಯವಸ್ಥೆಯಿಂದ ರೆಷನ್‌ಕಾರ್ಡ್ ಹೊಂದಿರುವ ಬಡವರು ಅಲೆದಾಡುವಂತಾಗಿದೆ. ಸೀಮೆ ಎಣ್ಣೆ ಪಡೆಯಲು ಬೇರೆಕಡೆ ಇರುವ ಆನ್‌ಲೈನ್ ನೋಂದಣಿ ಕೇಂದ್ರಕ್ಕೆ ತೆರಳಿ ಬೆರಳಚ್ಚು ನೀಡಿ ಟೋಕನ್‌ನ್ನು ಪಡೆಯುವುದು ಸಮಸ್ಯೆಯಾಗಿದೆ. ರೋಗಿಗಳಿಗೆ, ಅಂಗವಿಕಲರಿಗೆ ಇದು ಬಹಳ ಕಷ್ಟವಾಗುತ್ತದೆ. ಸೀಮೆಎಣ್ಣೆಗೆ ಪಡಿತರ ಅಂಗಡಿಗೆ ಬರುವವರು ಪ್ರತೀ ತಿಂಗಳ ನಿಗದಿತ ಸಮಯದಲ್ಲಿ ಟೋಕನ್ ಹೊಂದಿಸುವುದು ಕಷ್ಟಕರ ಕೆಲಸವಾಗಿದೆ. ಈ ಕೆಲಸವನ್ನು ನಿರ್ವಹಿಸುವ ಸೈಬರ್ ಕೇಂದ್ರದವರಿಗೂ ಬಹಳ ಸಮಸ್ಯೆಯಾಗುತ್ತಿದೆ. ಸರ್ವರ್ ತಾಸುಗಟ್ಟಲೇ ಸ್ಥಗಿತ ಹಾಗೂ ನಿಧಾನಗತಿಯಲ್ಲಿದ್ದು ಇದರಿಂದ ದಿನಗಟ್ಟಲೆಯಾವುದೇ ಕೆಲಸವಾಗುವುದಿಲ್ಲ ಮತ್ತು ಜನರು ಸಾಲುಗಟ್ಟಿ ನಿಂತು ಪರದಾಡುವಂತಾಗಿದೆ. ಈ ಹೊಸ ವ್ಯವಸ್ಥೆಯನ್ನು ಕೂಡಲೇ ರದ್ದುಪಡಿಸಿ ಎಂದಿನಂತೆ ಪಡಿತರ ಅಂಗಡಿಯಲ್ಲಿ ಎಲ್ಲಾ ವಸ್ತುಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಕರವೇ ತಾಲೂಕಾಧ್ಯಕ್ಷ ಉದಯರಾಜ್ ಮೇಸ್ತ, ಗೌರವಾಧ್ಯಕ್ಷ ಜಿ.ಜಿ.ಶಂಕರ, ಮಾರುತಿ ಸಂಕೊಳ್ಳಿ, ಶೇಖರ ಒಗ್ಗರ, ಗಣಪತಿ ಮೇಸ್ತ, ಸ್ಟೀಫನ್ ರೊಡ್ರಿಗಸ್, ಅಜಿತ ನಾಯ್ಕ, ಆನಂದ ಅಂಬಿಗ, ಅಲ್ತಾಫ್ ಶೇಖ್ ಮತ್ತಿತರರು ಉಪಸ್ಥಿತರಿದ್ದರು.





