ಯುನಿವೆಫ್‌ನಿಂದ ಶೈಕ್ಷಣಿಕ ಜಾಗೃತಿ ಅಭಿಯಾನ
ಮಂಗಳೂರು, ಆ. 12: ಯುನಿವೆಫ್ ಕರ್ನಾಟಕ ಇದರ 2016ನೆ ಸಾಲಿನ ಶೈಕ್ಷಣಿಕ ಅಭಿಯಾನಕ್ಕೆ ಆಗಸ್ಟ್ 15ರಂದು ನಗರದ ಫಳ್ನೀರ್ ರಸ್ತೆಯ ದಾರುಲ್ ಇಲ್ಮ್ ಮದ್ರಸ ಸಭಾಂಗಣದಲ್ಲಿ 70ನೆ ವರ್ಷದ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಚಾಲನೆ ನೀಡಲಾಗುವುದು.
‘ವೌಲ್ಯಾಧಾರಿತ ಶಿಕ್ಷಣದಿಂದ ಉತ್ತಮ ಸಮಾಜ’ ಎಂಬ ಕೇಂದ್ರೀಯ ವಿಷಯದಲ್ಲಿ ಆಗಸ್ಟ್ 15ರಿಂದ ಸೆಪ್ಟಂಬರ್ 15ರವರೆಗೆ ಶಿಕ್ಷಣ ನಮ್ಮ ಹಕ್ಕು ಎಂಬ ಶೀರ್ಷಿಕೆಯಡಿಯಲ್ಲಿ ಶೈಕ್ಷಣಿಕ ಮಾಸಾಚರಣೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಹಲವು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವೌಲ್ಯಾಧಾರಿತ ಶಿಕ್ಷಣದ ಅರಿವು ಮೂಡಿಸುವುದರ ಜೊತೆಗೆ ಆ ಶಾಲಾ ಕಾಲೇಜಿನ ಪ್ರತಿಭಾವಂಜ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಗುವುದು.
ಸೆ.15ರಂದು ಅಭಿಯಾನ ಕೊನೆಗೊಳ್ಳಲಿದ್ದು, ಬಳಿಕ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ‘ವೌಲಾನಾ ಅಬುಲ ಕಲಾಂ ಆಝಾದ್’ ಮತ್ತು ‘ಸರ್ ಅಲ್ಲಾಮಾ ಇಕ್ಬಾಲ್’ ಪ್ರಶಸ್ತಿ ಪ್ರದಾನ, ಪತ್ರ, ಹಾಗೂ ತಲಾ 5,000 ರೂ. ನಗದು ನೀಡಿ ಸನ್ಮಾನಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.





