ಆರೋಪಿಗಳಿಗೆ ರಾಜಾತಿಥ್ಯ: ವಿವಾದ ಸೃಷ್ಟಿಸಿದ ವೀಡಿಯೊ
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ

ಉಡುಪಿ, ಆ.12: ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳೊಂದಿಗೆ ಪೊಲೀಸರು ನಿಟ್ಟೆಯ ಪ್ರತಿಷ್ಠಿತ ಹೋಟೆಲೊಂದರಲ್ಲಿ ಊಟ ಮಾಡಿ ಹೊರ ಬರುತ್ತಿರುವ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಮತ್ತೊಂದು ವಿವಾದವನ್ನು ಸೃಷ್ಟಿಸಿದೆ.
ಈ ಹಿಂದೆ ತನಿಖಾಧಿಕಾರಿಯಾಗಿದ್ದ ಗಿರೀಶ್ ತನ್ನ ಜೀಪಿನ ಮುಂದಿನ ಸೀಟಿನಲ್ಲಿ ಆರೋಪಿ ನವನೀತ್‌ನನ್ನು ಕುಳ್ಳಿರಿಸಿಕೊಂಡು ಹೋಗಿರುವುದು ತೀವ್ರ ಜನಾಕ್ರೋಶಕ್ಕೆ ಕಾರಣವಾಗಿರುವ ಬೆನ್ನಲ್ಲೆ ಮತ್ತೊಂದು ವಿವಾದ ಬೆಳಕಿಗೆ ಬಂದಿದೆ. ಈ ಮೂಲಕ ಪೊಲೀಸರು ಆರೋಪಿಗಳೊಂದಿಗೆ ಶಾಮೀಲಾಗಿದ್ದಾರೆಂಬ ಆರೋಪಗಳಿಗೆ ಪುಷ್ಠಿ ನೀಡಿವೆ.
ಹೊಟೇಲಿನ ಸಿಸಿಟಿವಿಯಲ್ಲಿ ದಾಖಲಾಗಿರುವ ಈ ದೃಶ್ಯದಲ್ಲಿ ಈಗಿನ ತನಿಖಾಧಿಕಾರಿ ಸುಮನಾ ನೇತೃತ್ವದಲ್ಲಿ ಪೊಲೀಸರು ಆರೋಪಿಗಳನ್ನು ರಾಜಾತಿಥ್ಯದಲ್ಲಿ ಕರೆದುಕೊಂಡು ಬಂದು ಹೊಟೇಲಿನಲ್ಲಿ ಊಟ ಮಾಡಿ ಹೊರ ಬರುವುದು ಕಂಡುಬರುತ್ತದೆ. ಈ ದೃಶ್ಯಗಳು ಆ.10ರಂದು ಸಂಜೆ 4ಗಂಟೆಗೆ ದಾಖಲಾಗಿರುವುದು ತಿಳಿದು ಬರುತ್ತದೆ. ಇವರೊಂದಿಗೆ ಸಾಕ್ಷನಾಶ ಮಾಡಿರುವ ಆರೋಪಕ್ಕೆ ಒಳಗಾಗಿರುವ ನಿರಂಜನ್ ಭಟ್‌ನ ತಂದೆ ಶ್ರೀನಿವಾಸ ಭಟ್ ಹಾಗೂ ಕಾರು ಚಾಲಕ ರಾಘವೇಂದ್ರ ಕೂಡ ಇರುವುದು ಈ ದೃಶ್ಯಗಳಲ್ಲಿ ಕಂಡುಬರುತ್ತದೆ.







