ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ಸಂಸದರ ಧರಣಿ
ಕೊಬ್ಬರಿ ಕ್ವಿಂಟಾಲ್‌ಗೆ 20 ಸಾವಿರ ರೂ., ಅಡಿಕೆಗೆ 40 ಸಾವಿರ ರೂ. ನಿಗದಿಗೆ ಆಗ್ರಹ

ಬೆಂಗಳೂರು, ಆ. 12: ತೆಂಗಿನಕಾಯಿಗೆ ಪ್ರತಿ ಕ್ವಿಂಟಾಲ್‌ಗೆ 3ಸಾವಿರ ರೂ., ಕೊಬ್ಬರಿ ಕ್ವಿಂಟಾಲ್‌ಗೆ 20ಸಾವಿರ ರೂ. ಹಾಗೂ ಅಡಿಕೆಗೆ ಕ್ವಿಂಟಾಲ್‌ಗೆ 40 ಸಾವಿರ ರೂ.ಬೆಲೆ ನಿಗದಿಪಡಿಸಬೇಕು. ತೆಂಗು ಮತ್ತು ಅಡಿಕೆ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರ ನೆರವಿಗೆ ಕೇಂದ್ರ ಸರಕಾರ ಧಾವಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸಂಸದರು ಧರಣಿ ಸತ್ಯಾಗ್ರಹ ನಡೆಸಿದ್ದಾರೆ.
ಶುಕ್ರವಾರ ಹೊಸದಿಲ್ಲಿಯ ಸಂಸತ್ ಭವನದ ಬಳಿ ಇರುವ ಮಹಾತ್ಮಾ ಗಾಂಧಿ ಪುತ್ಥಳಿಯ ಮುಂದೆ ಧರಣಿ ನಡೆಸಿದ ರಾಜ್ಯಸಭಾ ಸದಸ್ಯ ಕೆ.ರೆಹ್ಮಾನ್ ಖಾನ್, ಬಿ.ಕೆ. ಹರಿಪ್ರಸಾದ್, ಸಂಸದರಾದ ಬಿ.ಎನ್.ಚಂದ್ರಪ್ಪ, ಮುದ್ದಹನುಮೇಗೌಡ, ಧ್ರುವ ನಾರಾಯಣ, ಡಿ.ಕೆ.ಸುರೇಶ್, ಪ್ರಕಾಶ್ ಹುಕ್ಕೇರಿ, ವೀರಪ್ಪಮೊಯ್ಲಿ, ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಕೇಂದ್ರ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದ ಬಹುಭಾಗದಲ್ಲಿ ತೆಂಗು ಮತ್ತು ಅಡಿಕೆ ರೈತರ ಪ್ರಮುಖ ಬೆಳೆಯಾಗಿದ್ದು, ತೀವ್ರ ಸ್ವರೂಪದ ಬೆಲೆ ಕುಸಿತದ ಹಿನ್ನೆಲೆಯಲ್ಲಿ ರೈತರು ಸಾಲದ ಸುಳಿಗೆ ಸಿಲುಕಿದ್ದು, ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ ಎಂದು ಸಂಸದರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳೆಗಾರರ ನೆರವಿಗೆ ಧಾವಿಸಬೇಕಿದ್ದ ಕೇಂದ್ರ ಸರಕಾರದ ದಿವ್ಯ ನಿರ್ಲಕ್ಷ ಹಾಗೂ ರೈತ ವಿರೋಧಿ ನೀತಿಯಿಂದಾಗಿ ತೆಂಗು ಮತ್ತು ಅಡಿಕೆ ಬೆಳೆಗಾರರಿಗೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ. ಕೇಂದ್ರ ಸರಕಾರ ಹೊರಗಿನಿಂದ ಬರುತ್ತಿರುವ ತೆಂಗಿನಕಾಯಿ ತಡೆಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಸಂಸದರು ಆಕ್ಷೇಪಿಸಿದ್ದಾರೆ.
ಕೊಬ್ಬರಿ, ತೆಂಗು, ಅಡಿಕೆಗೆ ಪ್ರೋತ್ಸಾಹದಾಯಕ ಬೆಂಬಲ ಬೆಲೆ ನಿಗದಿಪಡಿಸುವುದು ಕೇಂದ್ರ ಸರಕಾರ ಜವಾಬ್ದಾರಿ. ಕೊಬ್ಬರಿ ಕ್ವಿಂಟಾಲ್‌ಗೆ 6,240ರೂ. ಹಾಗೂ ತೆಂಗಿನಕಾಯಿ ಕ್ವಿಂಟಾಲ್‌ಗೆ 1,600 ರೂ.ಬೆಂಬಲ ಬೆಲೆ ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಸಂಸದರು ಟೀಕಿಸಿದ್ದಾರೆ.
ಸಂಕಷ್ಟಕ್ಕೆ ಸಿಲುಕಿರುವ ತೆಂಗು, ಅಡಿಕೆ ಮತ್ತು ಕೊಬ್ಬರಿ ರೈತರಿಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿರುವ ಸಂಸದರು, ಈ ಸಂಬಂಧ ಕೇಂದ್ರ ಕೃಷಿ ಸಚಿವರು ಹಾಗೂ ಪ್ರಧಾನಿ ನರೇಂದ್ರ ವೋದಿ ಅವರು ಕೂಡಲೇ ಪ್ರತಿಕ್ರಿಯಿಸಬೇಕೆಂದು ಆಗ್ರಹಿಸಿದ್ದಾರೆ.





