ಮೋಡ ಬಿತ್ತನೆ: ನಿರ್ಧಾರದಿಂದ ಹಿಂದೆ ಸರಿದ ಸರಕಾರ

ಬೆಂಗಳೂರು, ಆ.12: ಮೋಡ ಬಿತ್ತನೆಗೆ ಸಂಬಂಧಿಸಿದಂತೆ ನಿರಾಶಾದಾಯಕ ವರದಿ ಬಂದಿರುವುದರಿಂದ ಸರಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆ ಹಿನ್ನೆಲೆಯಲ್ಲಿ ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಮಳೆಯ ಕೊರತೆಯುಂಟಾಗಿರುವುದರಿಂದ ಮೋಡ ಬಿತ್ತನೆ ಮಾಡಲು ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ವರದಿ ನೀಡುವಂತೆ ಹವಾಮಾನ ಇಲಾಖೆಯ ನಿವೃತ್ತ ನಿರ್ದೇಶಕ ಆರ್.ಬಿ.ಶರ್ಮಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು ಎಂದು ಅವರು ಹೇಳಿದರು.
ಮೋಡ ಬಿತ್ತನೆಗೆ ಕನಿಷ್ಠ 30 ದಿನಗಳ ಕಾಲಾವಧಿ ಬೇಕು. ಅದಕ್ಕಾಗಿ ಅಮೆರಿಕದಿಂದ ರೇಡಾರ್ ತರಿಸಬೇಕು. ಸಂಬಂಧಪಟ್ಟ ಇಲಾಖೆಗಳ ಅನುಮತಿಯನ್ನು ಪಡೆಯಬೇಕೆಂದು ಹವಾಮಾನ ಇಲಾಖೆಯ ತಜ್ಞರು ಹೇಳಿದ್ದಾರೆ. ಆರ್.ಬಿ.ಶರ್ಮಾ ನೀಡಿರುವ ವರದಿ ಪ್ರಕಾರ ಮೋಡ ಬಿತ್ತನೆಯು ಆಗಸ್ಟ್‌ನಲ್ಲೇ ಪೂರ್ಣ ಗೊಳ್ಳಬೇಕು. ಹೀಗಾಗಿ ಸದ್ಯಕ್ಕೆ ಮೋಡ ಬಿತ್ತನೆ ಯಶಸ್ವಿ ಯಾಗುವುದಿಲ್ಲ ಎಂಬ ತಜ್ಞರ ಅಭಿಪ್ರಾಯಕ್ಕೆ ಮುಖ್ಯಮಂತ್ರಿಗಳು ಸಮ್ಮತಿ ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.
ಕಾವೇರಿ ಹಾಗೂ ತುಂಗಭದ್ರಾ ಕಣಿವೆಯಲ್ಲಿನ ನೀರಿನ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ವಿವರವಾಗಿ ಚರ್ಚೆ ನಡೆಸಲಾಗಿದೆ. ಕಾವೇರಿ ಕಣಿವೆಯಲ್ಲಿ ಕಳೆದ ಬಾರಿಗಿಂತ ಈ ವರ್ಷ ನೀರಿನ ಪ್ರಮಾಣವು ಶೇ.54ರಷ್ಟು ಇಳಿಕೆಯಾಗಿದೆ. ತುಂಗಭದ್ರಾ ಅಣೆಕಟ್ಟಿನಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 69 ಟಿಎಂಸಿ ನೀರಿತ್ತು. ಆದರೆ, ಈ ಬಾರಿ 44 ಟಿಎಂಸಿ ಮಾತ್ರ ಇದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಕಾವೇರಿ, ಆಲಮಟ್ಟಿ, ನಾರಾಯಣಪುರ ಸೇರಿದಂತೆ ರಾಜ್ಯದ ಬಹುತೇಕ ಜಲಾನಯನ ಪ್ರದೇಶಗಳ ವ್ಯಾಪ್ತಿಯಲ್ಲಿ ಮಳೆಯ ಕೊರತೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು. ಈ ಹಿನ್ನೆಲೆಯಲ್ಲಿ ರೈತರು ಭತ್ತ ಮತ್ತು ಕಬ್ಬು ಬೆಳೆಯದಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ನೀರಾವರಿ ಸಲಹಾ ಸಮಿತಿಗಳು ಕಾಲ ಕಾಲಕ್ಕೆ ಮೇಲುಸ್ತುವಾರಿ ನೋಡಿಕೊಂಡು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬೇಕು. ಕುಡಿಯುವ ನೀರಿಗೆ ಯಾವುದೇ ಬಗೆಯ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದರು.
ಕೆಆರ್‌ಎಸ್‌ನಲ್ಲಿ 62 ಟಿಎಂಸಿ ನೀರು ಮಾತ್ರ ಲಭ್ಯವಿದೆ. ತಮಿಳುನಾಡಿಗೆ ಸಂಕಷ್ಟಸೂತ್ರದ ಪ್ರಕಾರ ಎಷ್ಟು ಪ್ರಮಾಣದಲ್ಲಿ ನೀರು ಬಿಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು. ಸಭೆಯಲ್ಲಿ ಕೃಷಿ ಸಚಿವ ಕೃಷ್ಣಭೈರೇಗೌಡ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.





