ಗಡಿಯನ್ನು ಮರು ತೆರೆಯಲು ವೆನೆಝುವೆಲ, ಕೊಲಂಬಿಯ ಒಪ್ಪಿಗೆ
ಕ್ಯಾರಕಸ್ (ವೆನೆಝುವೆಲ), ಆ. 12: ತಮ್ಮ ನಡುವಿನ ಗಡಿಯನ್ನು ಹಂತ ಹಂತವಾಗಿ ಮರು ತೆರೆಯಲು ವೆನೆಝುವೆಲ ಮತ್ತು ಕೊಲಂಬಿಯ ದೇಶಗಳು ಗುರುವಾರ ಒಪ್ಪಿಕೊಂಡಿವೆ. ಒಂದು ವರ್ಷದ ಹಿಂದೆ ಕಳ್ಳಸಾಗಣೆೆಯನ್ನು ತಡೆಯಲು ಗಡಿಯನ್ನು ವೆನೆಝುವೆಲ ಮುಚ್ಚಿತ್ತು.
ವೆನೆಝುವೆಲದ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಕೊಲಂಬಿಯದ ಅಧ್ಯಕ್ಷ ಜುವಾನ್ ಮ್ಯಾನುಯಲ್ ಸ್ಯಾಂಟೊಸ್ ವೆನೆಝುವೆಲದ ನಗರ ಪೋರ್ಟೊ ಒರ್ಡಾಝ್‌ನಲ್ಲಿ ಮಾತುಕತೆ ನಡೆಸಿದ ಬಳಿಕ ಈ ಕುರಿತ ಪ್ರಕಟನೆಯನ್ನು ಹೊರಡಿಸಲಾಗಿದೆ.
ಗಡಿ ತೆರೆಯುವ ಪ್ರಕ್ರಿಯೆಯನ್ನು ಶನಿವಾರದಿಂದ ಆರಂಭಿಸಲು ಉಭಯ ದೇಶಗಳ ಮುಖ್ಯಸ್ಥರು ಒಪ್ಪಿದ್ದಾರೆ. ಪಾದಚಾರಿಗಳಿಗಾಗಿ ಐದು ಗಡಿ ತಪಾಸಣಾ ಠಾಣೆಗಳನ್ನು ಪ್ರತಿ ದಿನ ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ಅಧಿಕಾರಿಗಳು ತೆರೆಯಲಿದ್ದಾರೆ.
ವಾರಾಂತ್ಯದ ದಿನಗಳಲ್ಲಿ ವೆನೆಝುವೆಲದ ಜನರು ಅಹಾರ ಮತ್ತು ಔಷಧಿಗಳನ್ನು ಖರೀದಿಸಲು ಕೊಲಂಬಿಯಕ್ಕೆ ಧಾವಿಸುವುದು ಖಚಿತವಾಗಿದೆ. ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ವೆನೆಝುವೆಲ ದಿನನಿತ್ಯ ಬಳಸುವ ಆವಶ್ಯಕ ವಸ್ತುಗಳ ಕೊರತೆಯನ್ನು ಎದುರಿಸುತ್ತಿದೆ.





