50 ಮೀ. ಏರ್‌ರೈಫಲ್: ಗುರಿ ತಪ್ಪಿದ ಗಗನ್, ಚೈನ್ ಸಿಂಗ್

ರಿಯೋ ಡಿ ಜನೈರೊ, ಆ.12: ಶೂಟರ್‌ಗಳಾದ ಗಗನ್ ನಾರಂಗ್ ಹಾಗೂ ಚೈನ್ ಸಿಂಗ್ ಪುರುಷರ 50 ಮೀ. ರೈಫಲ್ ಪ್ರೋನ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲವಾಗುವುದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್‌ಗಳ ಕಳಪೆ ಪ್ರದರ್ಶನ ಮುಂದುವರಿದಿದೆ.
ಶುಕ್ರವಾರ ಇಲ್ಲಿ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಶೂಟರ್ ನಾರಂಗ್ ಉತ್ತಮ ಆರಂಭ ಪಡೆದಿದ್ದರೂ ಒಟ್ಟು 623.1 ಅಂಕ ಗಳಿಸಿ 13ನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಭಾರತದ ಇನ್ನೋರ್ವ ಶೂಟರ್ ಚೈನ್ ಸಿಂಗ್ ಸ್ವಲ್ಪವೂ ಹೋರಾಟವನ್ನು ನೀಡದೆ 36ನೆ ಸ್ಥಾನ ಪಡೆದರು.
ಭಾರತದ ಶೂಟಿಂಗ್‌ನ ಸ್ಕೀಟ್ ಹಾಗೂ 25 ಮೀ. ರ್ಯಾಪಿಡ್ ಫೈಯರ್ ಅರ್ಹತಾ ಸುತ್ತಿನಲ್ಲಿ ಮಿರಾಝ್ ಅಹ್ಮದ್ ಹಾಗೂ ಗುರುಪ್ರೀತ್ ಸಿಂಗ್ ಸ್ಪರ್ಧಿಸಲಿದ್ದಾರೆ. ನಾರಂಗ್ 10 ಮೀ. ಏರ್‌ರೈಫಲ್‌ನಲ್ಲೂ ಫೈನಲ್‌ಗೆ ತಲುಪಲು ವಿಫಲರಾಗಿದ್ದರು.
2008ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಫೈನಲ್ ಸುತ್ತಿಗೆ ತಲುಪಿದ್ದರೂ 0.5 ಅಂತರದಿಂದ ಸೋತು ನಾಲ್ಕನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ನಾರಂಗ್ ಹಾಗೂ ಸಿಂಗ್ ರವಿವಾರ ನಡೆಯಲಿರುವ 50 ಮೀ. ರೈಫಲ್ ತ್ರಿ ಪೊಸಿಶನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಥ್ಲೀಟ್‌ಗಳಿಂದಲೂ ನಿರಾಶೆ
ರಿಯೋ ಡಿ ಜನೈರೊ, ಆ.12: ಭಾರತದ ಅಥ್ಲೀಟ್‌ಗಳೂ ರಿಯೋ ಒಲಿಂಪಿಕ್ಸ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ.
ಶುಕ್ರವಾರ ಇಲ್ಲಿ ಆರಂಭವಾದ ಅಥ್ಲೆಟಿಕ್ಸ್ ಸ್ಪರ್ಧೆಯ ಮಹಿಳೆಯರ ಶಾಟ್‌ಪುಟ್ ಎಸೆತ ಹಾಗೂ ಪುರುಷರ 800 ಮೀ. ಓಟದ ಸ್ಪರ್ಧೆಯಲ್ಲಿ ಕ್ರಮವಾಗಿ ಮನ್‌ಪ್ರೀತ್ ಕೌರ್ ಹಾಗೂ ಜಿನ್ಸನ್ ಜಾನ್ಸನ್ ನಿರಾಶೆ ಮೂಡಿಸಿದರು.
ಮೂರನೆ ಪ್ರಯತ್ನದಲ್ಲಿ 16.76 ಮೀ. ದೂರ ಶಾಟ್‌ಪುಟ್ ಎಸೆದಿರುವ ಕೌರ್ ಅರ್ಹತಾ ಮಾರ್ಕ್ 18.40ನ್ನು ತಲುಪಲು ವಿಫಲರಾದರು. ಅಂತಿಮವಾಗಿ 20ನೆ ಸ್ಥಾನ ಪಡೆದರು.
ಪುರುಷರ 800 ಮೀ. ಓಟದ ಮೊದಲ ಸುತ್ತಿನಲ್ಲಿ 1:47.27 ನಿಮಿಷದಲ್ಲಿ ಗುರಿ ತಲುಪಿರುವ ಕೇರಳದ ಓಟಗಾರ ಜಾನ್ಸನ್ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲರಾದರು.
ಕ್ವಾರ್ಟರ್ ಫೈನಲ್ ತಲುಪಲು ದಾಸ್ ವಿಫಲ
ರಿಯೋ ಡಿಜನೈರೊ, ಆ.12: ಪದಕದ ಭರವಸೆ ಮೂಡಿಸಿದ್ದ ಕೋಲ್ಕತಾದ ಬಿಲ್ಲುಗಾರ ಅತಾನು ದಾಸ್ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಆರ್ಚರಿ ಸ್ಪರ್ಧೆಯಲ್ಲಿ ಭಾರತ ಸವಾಲಿಗೆ ತೆರೆ ಬಿದ್ದಿದೆ.
ಶುಕ್ರವಾರ ನಡೆದ ಪುರುಷರ ವೈಯಕ್ತಿಕ ವಿಭಾಗದ ಅಂತಿಮ-16ರ ಸುತ್ತಿನಲ್ಲಿ ದಾಸ್ ಅವರು ದಕ್ಷಿಣ ಕೊರಿಯಾದ ವಿಶ್ವದ ನಂ.8ನೆ ಆಟಗಾರ ಲೀ ಸೆಯೂಂಗ್-ಯೂನ್ ವಿರುದ್ಧ 4-6(28-30, 30-28, 27-27, 27-28, 28-28) ಅಂತರದಿಂದ ಸೋತು ಚೊಚ್ಚಲ ಗೇಮ್ಸ್‌ನಲ್ಲಿ ತನ್ನ ಹೋರಾಟ ಅಂತ್ಯಗೊಳಿಸಿದರು.
ಮಹಿಳೆಯರ ವೈಯಕ್ತಿಕ ಆರ್ಚರಿಯಲ್ಲಿ ಗುರುವಾರ ದೀಪಿಕಾ ಕುಮಾರಿ ಹಾಗೂ ಬಾಂಬೆಲಾದೇವಿ ಅಂತಿಮ-16ರ ಸುತ್ತಿನಲ್ಲಿ ಸೋತಿದ್ದರು. ಅರ್ಹತಾ ಸುತ್ತಿನಲ್ಲಿ ಎರಡೂ ಪಂದ್ಯಗಳನ್ನು ಸುಲಭವಾಗಿ ಗೆದ್ದುಕೊಂಡಿದ್ದ ಅತಾನುದಾಸ್ ಪ್ರಿ-ಕ್ವಾರ್ಟರ್‌ನಲ್ಲಿ ಎಡವಿದ್ದಾರೆ.







