ತಾರಕಕ್ಕೇರಿದ ಕ್ರೈಮಿಯ ಸಂಘರ್ಷ
ಯುಕ್ರೇನ್ ಸೈನಿಕರು ಗರಿಷ್ಠ ಜಾಗೃತ ಸ್ಥಿತಿಯಲ್ಲಿ
ಕೀವ್ (ಯುಕ್ರೇನ್), ಆ. 12: ವಿವಾದಾಸ್ಪದ ಕ್ರೈಮಿಯ ಪರ್ಯಾಯ ದ್ವೀಪದ ಮೇಲೆ ಸಶಸ್ತ್ರ ದಾಳಿ ನಡೆಸಲು ಯುಕ್ರೇನ್ ಪ್ರಯತ್ನಿಸುತ್ತಿದೆ ಎಂಬುದಾಗಿ ರಶ್ಯ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವಂತೆಯೇ, ಕ್ರೈಮಿಯದ ಸುತ್ತಲಿರುವ ತನ್ನ ಪಡೆಗಳನ್ನು ಯುಕ್ರೇನ್ ಗರಿಷ್ಠ ಜಾಗೃತ ಸ್ಥಿತಿಯಲ್ಲಿರಿಸಿದೆ.
ಯುಕ್ರೇನ್‌ನ ಸೇನಾ ಗುಪ್ತಚರ ಇಲಾಖೆ ಕ್ರೈಮಿಯದಲ್ಲಿ ಈ ವಾರ ನಡೆಸಿದ ‘‘ಭಯೋತ್ಪಾದಕ ದಾಳಿ’’ಗಳನ್ನು ವಿಫಲಗೊಳಿಸಿರುವುದಾಗಿಯೂ, ಸಶಸ್ತ್ರ ಆಕ್ರಮಣಗಳನ್ನು ಹಿಮ್ಮೆಟ್ಟಿಸಿರುವುದಾಗಿಯೂ ರಶ್ಯದ ಎಫ್‌ಎಸ್‌ಬಿ ಭದ್ರತಾ ಸಂಸ್ಥೆ ಬುಧವಾರ ಹೇಳಿದೆ.
ಆದರೆ, ಇದನ್ನು ಯುಕ್ರೇನ್ ಬಲವಾಗಿ ಅಲ್ಲಗಳೆದಿದೆ.
ಯುಕ್ರೇನ್‌ನ ಭಾಗವಾಗಿದ್ದ ಕ್ರೈಮಿಯವನ್ನು ರಶ್ಯ 2014ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಈಗ ಈ ಹೊಸ ಆರೋಪಗಳ ಹಿನ್ನೆಲೆಯಲ್ಲಿ ಈ ವಲಯ ಮತ್ತೆ ಬೆಂಕಿ ಕುಂಡವಾಗಿದೆ.
ಮತ್ತೆ ಭುಗಿಲೆದ್ದಿರುವ ಕ್ರೈಮಿಯ ವಿವಾದವನ್ನು ನ್ಯಾಟೊ ಕಳವಳದಿಂದ ನೋಡುತ್ತಿದೆ ಎಂದು ನ್ಯಾಟೊ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.





