ಟರ್ಕಿ: ಮಾಜಿ ಫುಟ್ಬಾಲ್ ಆಟಗಾರನಿಗೆ ಆರೆಸ್ಟ್ ವಾರಂಟ್

ಇಸ್ತಾಂಬುಲ್,ಆ.13:ಟರ್ಕಿಯ ಮಾಜಿ ಫುಟ್‌ಬಾಲ್ ಸ್ಟಾರ್ ಆಟಗಾರರೊಬ್ಬರ ವಿರುದ್ಧ ವಿಫಲ ಕ್ಷಿಪ್ರ ಸೇನಾಕ್ರಾಂತಿಯಲ್ಲಿ ಪಾಲ್ಗೊಂಡಿದ್ದಾರೆಂಬ ಶಂಕೆಯಲ್ಲಿ ಆರೆಸ್ಟ್ ವಾರಂಟ್ ಹೊರಡಿಸಲಾಗಿದೆ ಎಂದು ವರದಿಯಾಗಿದೆ. ಟರ್ಕಿ ಮಾಜಿ ಅಂತಾರಾಷ್ಟ್ರೀಯ ಸ್ಟಾರ್ ಸ್ಟ್ರೈಕರ್ ಹಕಾನ್ ಶುಕೂರ್ ವಿರುದ್ಧ ಟರ್ಕಿ ಅಧಿಕಾರಿಗಳು ಅಮೆರಿಕ ಕೇಂದ್ರವಾಗಿಟ್ಟು ಕಾರ್ಯಾಚರಿಸುತ್ತಿರುವ ಫತೇವುಲ್ಲ ಗುಲೇನ್‌ರ ಭಯೋತ್ಪಾದಕ ಸಂಘಟನೆಯ ಸದಸ್ಯ ಎಂಬ ನೆಲೆಯಲ್ಲಿ ಬಂಧನಾದೇಶ ಹೊರಡಿಸಿದ್ದಾರೆಂದು ತಿಳಿದು ಬಂದಿದೆ.
ಕಳೆದ ವರ್ಷ ಹಾಕಾನ್ ಮತ್ತುಕುಟುಂಬ ಟರ್ಕಿ ತೊರೆದಿದ್ದರು. ಸೈನಿಕ ಬುಡಮೇಲು ಕೃತ್ಯದೊಂದಿಗೆ ಸಂಬಂಧವನ್ನು ಹೊಂದಿದ್ದಾರೆಂದು ಕಂಡು ಬಂದ ಹಿನ್ನೆಲೆಯಲ್ಲಿ ನ್ಯಾಯಾಂಗ, ಸೇನೆ, ಪೊಲೀಸ್ ಮುಂತಾದ ಕ್ಷೇತ್ರಗಳಲ್ಲಿ ಉದ್ಯೋಗಿಗಳಾಗಿದ್ದ 10,000ಕ್ಕೂ ಅಧಿಕ ಮಂದಿಯನ್ನು ಟರ್ಕಿಯಲ್ಲಿ ಬಂಧನದಲ್ಲಿರಿಸಲಾಗಿದೆ. ಅಥವಾ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ವರದಿ ತಿಳಿಸಿದೆ. ಜುಲೈ ಹದಿನೈದರಂದು ಟರ್ಕಿಯಲ್ಲಿ ನಡೆದ ಕ್ಷಿಪ್ರ ವಿಫಲ ಸೇನಾಕ್ರಾಂತಿ ಯತ್ನದ ನಂತರ 240 ಮಂದಿ ಕೊಲ್ಲಲ್ಪಟ್ಟಿದ್ದು, 2,200 ಮಂದಿ ಗಾಯಗೊಂಡಿದ್ದಾರೆಂದೂ ವರದಿ ವಿವರಿಸಿದೆ.





