ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ರಕ್ತದಲ್ಲಿ ಪತ್ರ ಬರೆದ ಬಾಲಕಿ!

ಎರಡು ತಿಂಗಳ ಹಿಂದೆ ಬುಲಂದಶಹರ್ ನ 15 ವರ್ಷದ ಬಾಲಕಿ ಲತಿಕಾ ಬನ್ಸಾಲ್ ಜೀವನದಲ್ಲೆಂದೂ ಮರೆಯದ ಘಟನೆಗೆ ಸಾಕ್ಷಿಯಾದಳು. ಜೂನ್ 14ರಂದು ಲತಿಕಾರ ತಾಯಿ ಅನು ಬನ್ಸಾಲರನ್ನು ಆಕೆಯ ಮತ್ತು ಆಕೆಯ 11 ವರ್ಷದ ಸಹೋದರಿ ತಾನ್ಯಾ ಮುಂದೆಯೇ ಸಜೀವವಾಗಿ ದಹನ ಮಾಡಲಾಯಿತು. ಗಂಡು ಮಗುವನ್ನು ಹೆಡೆಯದೆ ಇದ್ದುದಕ್ಕೆ ಅನುರ ಪತಿಯ ಮನೆಯವರು ಆಕೆಯನ್ನು ಕೊಂದಿದ್ದಾರೆ ಎನ್ನುವುದ ಮಕ್ಕಳ ಆರೋಪ.
ತಾಯಿ ಸಜೀವವಾಗಿ ಸುಟ್ಟು ಹೋಗುತ್ತಿದ್ದಾಗ ಲತಿಕಾ ಪೊಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡಿದರೂ ಯಾರೂ ಕಿವಿಗೊಡಲಿಲ್ಲ. ಆಕೆ ಆ್ಯಂಬ್ಯುಲೆನ್ಸಿಗೆ ಕರೆ ಮಾಡಿದರೂ ಅದೂ ಬರಲಿಲ್ಲ. ಅಂತಿಮವಾಗಿ ಆಕೆ ತನ್ನ ಸೋದರ ಮಾವನಿಗೆ ಕರೆ ಮಾಡಿದಾಗ ಅವರು ಹತ್ತು ನಿಮಿಷಗಳಲ್ಲಿ ಬಂದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಶೇ. 95ರಷ್ಟು ಸುಟ್ಟ ಗಾಯಗಳಿಂದ ದಾಖಲಾದ ಅನು ಬದುಕಲಿಲ್ಲ. ಈ ನಡುವೆ ಪೊಲೀಸರು ಮರಣವನ್ನು ಆತ್ಮಹತ್ಯೆಯೆಂದು ವರದಿ ತಯಾರಿಸಿದರು. ತಾಯಿಯ ಮರಣದ ಎರಡು ತಿಂಗಳ ನಂತರ ಹತಾಶ ಲತಿಕಾ ಮುಖ್ಯಮಂತ್ರಿ ಅಖಿಲೇಶ್ ಯಾದವರಿಗೆ ತನ್ನ ರಕ್ತದಲ್ಲಿ ಪತ್ರಬರೆದು ಕ್ರಮ ಕೈಗೊಳ್ಳಲು ಕೇಳಿಕೊಂಡಿದ್ದಾಳೆ.
“ನಾನು ನೋಡಿದ್ದನ್ನು ಮರೆಯಲೇ ಸಾಧ್ಯವಿಲ್ಲ. ನನ್ನ ಕಣ್ಣ ಮುಂದೆಯೇ ಅಮ್ಮನನ್ನು ಸಜೀವ ಸುಟ್ಟರು. ಕಳೆದ 15 ವರ್ಷಗಳಿಂದ ನನ್ನ ಅಮ್ಮ ಗಂಡು ಮಗುವನ್ನು ಹೆರದೆ ಇದ್ದುದಕ್ಕಾಗಿ ದೌರ್ಜನ್ಯಕ್ಕೆ ಒಳಗಾಗಿರುವುದನ್ನು ಕಂಡಿದ್ದೇನೆ. 11 ವರ್ಷಗಳ ಹಿಂದೆ ನನ್ನ ಸಹೋದರಿ ಹುಟ್ಟಿದಾಗ ನಾವು ಮೂವರನ್ನು ಮನೆಯಿಂದ ಹೊರಗಟ್ಟಲಾಯಿತು. ನಂತರ ನಾವು ಬಾಡಿಗೆ ಮನೆಯಲ್ಲಿದ್ದೆವು. ಜೂನ್ 14ರಂದು ನನ್ನ ಅಜ್ಜಿ ಮತ್ತು ಕೆಲವು ಸಂಬಂಧಿಕರು ನಮ್ಮ ಮನೆಗೆ ಬಂದು ಗಂಡು ಮಗುವಿಗಾಗಿ ತಂದೆಗೆ ಬೇರೆ ಮದುವೆ ಮಾಡುವುದಾಗಿ ಹೇಳಿದರು. ಅದರಿಂದ ಮಾತಿಗೆ ಮಾತು ಬೆಳೆದು ತಾಯಿಯನ್ನು ಕೊಂದು ಹಾಕಿದರು. ನಾನು ಮತ್ತು ನನ್ನ ಸಹೋದರಿಗೆ ಅಳುವುದು ಬಿಟ್ಟು ಇನ್ನೇನೂ ಮಾಡಲು ಸಾಧ್ಯವಾಗಿರಲಿಲ್ಲ. ನಾನು ಧೈರ್ಯದಿಂದ 100 ಸಂಖ್ಯೆಗೆ ಕರೆ ಮಾಡಿದೆ” ಎನ್ನುತ್ತಾರೆ ಲತಿಕಾ.
ಒಂಬತ್ತನೇ ತರಗತಿ ವಿದ್ಯಾರ್ಥಿನಿಗೆ ಉತ್ತರ ಪ್ರದೇಶದ ಪೊಲೀಸರ ಅಲಕ್ಷ್ಯದ ಅನುಭವ ಕರೆ ಮಾಡಿದಾಗಲೇ ತಿಳಿದು ಹೋಗಿತ್ತು. ಆಕೆ ಆ್ಯಂಬುಲೆನ್ಸಿಗೆ ಕರೆ ಮಾಡಿದರೆ ಅದೂ ಬರಲಿಲ್ಲ. ಹೀಗಾಗಿ ಸರ್ಕಾರಿ ಅಧಿಕಾರಿಗಳನ್ನು ಕರೆಯುವುದು ಬಿಟ್ಟು ತನ್ನ ಸೋದರ ಮಾವನನ್ನು ಕರೆದಾಗ ಅವರು ಹತ್ತೇ ನಿಮಿಷದಲ್ಲಿ ಬಂದಿದ್ದರು. ಕರೆ ಬಂದ ಕೂಡಲೇ ನಾನು ಅವರ ಮನೆಗೆ ಹೋಗಿದ್ದೆ. ನನ್ನ ಸಹೋದರಿಯ ಸ್ಥಿತಿ ಕಂಡು ಆಘಾತವಾಗಿತ್ತು. ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ. ಪೊಲೀಸರು ತಕ್ಷಣ ಬರುತ್ತಿದ್ದರೆ ಆಕೆ ಬದುಕುತ್ತಿದ್ದಳು. ಬೆಂಕಿ ಹಚ್ಚಿದ ಮುಖ್ಯ ಆರೋಪಿಗಳು ಅನುಳ ಪತಿಯ ಸಹೋದರ ಮತ್ತು ಅತ್ತೆ ಸ್ನೇಹಲತಾ. ಅವರು ಈಗಲೂ ಪೊಲೀಸರಿಗೆ ಲಂಚ ಕೊಟ್ಟು ಆರಾಮವಾಗಿ ಓಡಾಡಿಕೊಂಡಿದ್ದಾರೆ. ಅಮ್ಮನ ಕೊಲೆಯಲ್ಲಿ ಪಾಲುದಾರರಾಗಿರುವ ತಂದೆಯ ನೆರವೂ ಮಕ್ಕಳಿಗಿಲ್ಲ ಎನ್ನುತ್ತಾರೆ ಅನು ಸಹೋದರ ತರುಣ್ ಜಿಂದಾಲ್. ನ್ಯಾಯಕ್ಕಾಗಿ ಲತಿಕಾ ಹಲವು ಕಡೆ ಹೋದರೂ ಯಾರೂ ನೆರವಿಗೆ ಬಂದಿಲ್ಲ. ನಾನು ಮತ್ತು ಸೋದರ ಮಾವ ಎಲ್ಲಾ ಮಟ್ಟದ ಪೊಲೀಸರನ್ನೂ ಭೇಟಿಯಾದರೂ ಪ್ರಯೋಜನವಾಗಿಲ್ಲ. ಆಗಲೇ ನಾನು ರಕ್ತದಲ್ಲಿ ಮುಖ್ಯಮಂತ್ರಿಗೆ (ಅಖಿಲೇಶ್ ಯಾದವ್) ಪತ್ರ ಬರೆಯಲು ನಿರ್ಧರಿಸಿದೆ. ಮುಖ್ಯಮಂತ್ರಿ ನನ್ನ ಲೇಖನಿಗೆ ಪ್ರತಿಕ್ರಿಯಿಸದೆ ಇದ್ದರೂ ನನ್ನ ರಕ್ತಕ್ಕಾದರೂ ಪ್ರತಿಕ್ರಿಯಿಸುವ ಭರವಸೆ ಇದೆ ಎನ್ನುತ್ತಾರೆ ಲತಿಕಾ.
ಈ ನಡುವೆ, “ಮೃತರ ಪತಿ ಮನೋಜ್ ಬಂಸಾಲ್ ರನ್ನು ದೂರು ದಾಖಲಿಸಿದ ಕೂಡಲೇ ಬಂಧಿಸಲಾಗಿದೆ. ದೂರಿನಲ್ಲಿ ಹಲವು ಸಂಬಂಧಿಕರ ಹೆಸರುಗಳಿವೆ. ಆದರೆ ಅವರಲ್ಲಿ ಬಹುತೇಕರು ಬುಲಂದಶಹರ್ ಹೊರಗೆ ನೆಲೆಸಿದ್ದಾರೆ. ಆದರೆ ಪತಿ ತನ್ನ ಪತ್ನಿಯನ್ನು ಬದುಕಿಸುವ ಪ್ರಯತ್ನದಲ್ಲಿ ಶೇ. 32ರಷ್ಟು ಗಾಯಗೊಂಡಿರುವುದಾಗಿ ಹೇಳುತ್ತಾರೆ ಎನ್ನುತ್ತಾರೆ ಬುಲಂದಶಹರ್ ನ ಹೆಚ್ಚುವರಿ ಎಸ್ಪಿ (ನಗರ) ರಾಂ ಮೋಹನ್ ಸಿಂಗ್.
ಲತಿಕಾರ ಪತ್ರದ ಪ್ರತಿ ಟ್ವಿಟರ್ ನಲ್ಲಿ ವೈರಲ್ ಆದ ಮೇಲೆ ಬುಲಂದಶಹರ್ ಪೊಲೀಸರು ಟ್ವೀಟ್ ಮಾಡಿದ್ದಾರೆ. ಸತ್ತವರ ಪತಿ ಸೇರಿದಂತೆ ಎಂಟು ಮಂದಿಯ ಮೇಲೆ ದೂರು ದಾಖಲಿಸಲಾಗಿದೆ. ಪತಿಯನ್ನು ಜೈಲಿಗೆ ಕಳುಹಿಸಲಾಗಿದೆ ಮತ್ತು ಇತರ ಏಳು ಮಂದಿಯ ಹೆಸರನ್ನು ದೂರಿನಲ್ಲಿ ತಪ್ಪಾಗಿ ನಮೂದಿಸಲಾಗಿದೆ ಎಂದು ತಿಳಿದುಬಂದಿದೆ. ಮಹಿಳೆ ಸ್ವತಃ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ ಎಂದು ಟ್ವೀಟ್ ಹೇಳಿದೆ.
ಕೃಪೆ: timesofindia.in







