ದಾರಿ ಬಿಡಿ, ಫೆಲ್ಪ್ಸ್ ನನ್ನು ಸೋಲಿಸುವ ಈಜುಪಟು ಬಂದ
ತನ್ನ ಆರಾಧ್ಯದೈವನಿಗೇ ಸೋಲುಣಿಸಿದ ಫ್ಯಾನ್ !

ರಿಯೋ ಡಿ ಜನೈರೋ, ಆ.13: ಈಜು ಕ್ಷೇತ್ರದ ದಂತಕಥೆಯೆಂದೇ ಪರಿಗಣಿತರಾಗಿರುವ ಮೈಕೆಲ್ ಫೆಲ್ಪ್ಸ್ ಅವರನ್ನೇ ಸೋಲಿಸುವ ಈಜುಪಟುವೊಬ್ಬ ಕೊನೆಗೂ ಮೂಡಿ ಬಂದಿದ್ದಾರೆ. ಶುಕ್ರವಾರ ಸಿಂಗಾಪುರದ ಜೋಸೆಫ್ ಸ್ಕೂಲಿಂಗ್ 100 ಮೀಟರ್ ಬಟರ್ ಫ್ಲೈನಲ್ಲಿ ಫೆಲ್ಪ್ಸ್ ಅವರನ್ನು ಸೋಲಿಸಿ ತಮ್ಮ ದೇಶಕ್ಕೆ ಪ್ರಥಮ ಒಲಿಂಪಿಕ್ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಈ ಮೂಲಕ ಅವರು ಅಮೆರಿಕಾದ ಫೆಲ್ಪ್ಸ್ ಅವರನ್ನು ತಮ್ಮ 23ನೆ ಒಲಿಂಪಿಕ್ ಚಿನ್ನದಿಂದ ವಂಚಿತರನ್ನಾಗಿಸಿದ್ದಾರೆ.
100 ಮೀಟರ್ ಬಟರ್ ಫ್ಲೈ ಸ್ಪರ್ಧೆಯನ್ನು ಸ್ಕೂಲಿಂಗ್ ದಾಖಲೆ ಸಮಯ 50:39 ರಲ್ಲಿ ಪೂರ್ತಿಗೊಳಿಸಿದರೆ ಆಶ್ಚರ್ಯಕರವಾಗಿ ಫೆಲ್ಪ್ಸ್ ಸೇರಿದಂತೆ ಮೂವರು ಈ ದೂರವನ್ನು 51.14 ಸೆಕೆಂಡುಗಳಲ್ಲಿ ಕ್ರಮಿಸಿದರು. ತಮ್ಮ ನಿವೃತ್ತಿಯ ಮುಂಚಿನ ಕೊನೆಯ ಒಲಿಂಪಿಕ್ಸ್ ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸುತ್ತಿರುವ ಫೆಲ್ಪ್ಸ್ ಈ ಸ್ಪರ್ಧೆಯಲ್ಲಿ ತಮ್ಮ ಕಠಿಣ ಎದುರಾಳಿಗಳಾದ ದಕ್ಷಿಣ ಆಫ್ರಿಕಾದ ಚಾಡ್ ಲೆ ಕ್ಲೋಸ್ ಹಾಗೂ ಹಂಗೆರಿಯ ಲಝ್ಲೋ ಸೆಹ್ ಅವರೊಂದಿಗೆ ಎರಡನೆ ಸ್ಥಾನ ಹಂಚಿಕೊಂಡರು. ಚಿನ್ನ ಗೆದ್ದ 21 ರ ಸ್ಕೂಲಿಂಗ್ ಸಂತಸಕ್ಕೆ ಪಾರವೇ ಇಲ್ಲವಾಗಿದೆ. ಚಿಕ್ಕವನಿದ್ದಾಗ ಅವರು ತಮ್ಮ ಆದರ್ಶ ಫೆಲ್ಪ್ಸ್ ಅವರೊಂದಿಗೆ ಒಂದು ಭಾವಚಿತ್ರವನ್ನೂ ತೆಗೆಸಿಕೊಂಡಿದ್ದರು.
ಇಂದು ನಡೆಯಲಿರುವ 4x400 ಮೆಡ್ಲಿ ಫೆಲ್ಪ್ಸ್ ಅವರ ಕೊನೆಯ ಒಲಿಂಪಿಕ್ ಸ್ಫರ್ಧೆಯಾಗಲಿದೆ. ಇಲ್ಲಿಯ ತನಕ ಒಟ್ಟು 27 ಒಲಿಂಪಿಕ್ ಪದಕಗಳನ್ನು ಅವರು ಪಡೆದಿದ್ದಾರೆ. ರಿಯೋದಲ್ಲಿ ಫೆಲ್ಪ್ಸ್ ಪ್ರಥಮವಾಗಿ ಪಡೆದ ಬೆಳ್ಳಿ ಪದಕ ಇದಾಗಿದೆ. ಅವರೀಗ ಒಟ್ಡು 22 ಚಿನ್ನ, ಮೂರು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ವಿವಿಧ ಒಲಿಂಪಿಕ್ಸ್ ಗಳಲ್ಲಿ ಗೆದ್ದಿದ್ದಾರೆ.





