ಖುದಿರಾಮ್ ಬೋಸ್ : ನಾವು ಮರೆತ ಹುತಾತ್ಮ ಯುವ ಕ್ರಾಂತಿಕಾರಿ

ಹೊಸದಿಲ್ಲಿ,ಆ.13 : ಮೂವರು ಬ್ರಿಟಿಷರ ಹತ್ಯೆಗೈದ ತಪ್ಪಿಗಾಗಿ1908 ರಲ್ಲಿ ಖುದಿರಾಮ್ ಬೋಸ್ ಎಂಬ ಯುವ ಕ್ರಾಂತಿಕಾರಿ ಗಲ್ಲಿಗೇರಿಸಲ್ಪಟ್ಟಿದ್ದ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಆರಂಭದಲ್ಲಿ ಭಾಗಿಯಾಗಿದ್ದ ಈ ಕ್ರಾಂತಿಕಾರಿ ಯುವಕನ ಬಗ್ಗೆ ಆತ ನೇಣುಗಂಬವೇರಿ 100 ವರ್ಷಗಳ ನಂತರವೂ ಹೆಚ್ಚಿನವರಿಗೆ ತಿಳಿದಿಲ್ಲ.
ಖುದಿರಾಮ್ ಬೋಸ್ ನ ದೇಶಪ್ರೇಮ ಹಾಗೂ ತ್ಯಾಗ, ಬಲಿದಾನದ ಕಥೆಗಳು ಬಂಗಾಳ ಜನಪದದಲ್ಲಿ ಜನಪ್ರಿಯವಾಗಿದ್ದರೂ ರಾಜ್ಯದಿಂದ ಹೊರಗಿನವರಿಗೆ ಈತನ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ಮಿಡ್ನಾಪುರದ ಕಾಲೇಜಿಯೇಟ್ ಸ್ಕೂಲ್ ವಿದ್ಯಾರ್ಥಿಯಾಗಿದ್ದ ಬೋಸ್ 16 ವರ್ಷದವನಿರುವಾಗಲೇಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಆಧ್ಯಾತ್ಮಿಕ ನಾಯಕ ಅರೊಬಿಂದೋ ಘೋಷ್ ಅವರಿಂದ ಭಾರೀ ಪ್ರಭಾವಿತನಾಗಿದ್ದ. ಸಣ್ಣ ವಯಸ್ಸಿನಲ್ಲೇ ಹೆತ್ತವರನ್ನು ಕಳೆದುಕೊಂಡಿದ್ದ ಖುದಿರಾಮ್, ತನ್ನ ಅಕ್ಕನ ಆರೈಕೆಯಲ್ಲಿ ಬೆಳೆದಿದ್ದ. ವಿದ್ಯಾರ್ಥಿಯಾಗಿದ್ದಾಗ ಬೋಸ್ ಮಿಡ್ನಾಪುರ ಪ್ರಾಂತದ ಕೆಲ ರಹಸ್ಯ ಕ್ರಾಂತಿಕಾರಿ ಗುಂಪುಗಳಿಗೆ ಸಂದೇಶವಾಹಕನಾಗಿ ಕೆಲಸ ಮಾಡುತ್ತಿದ್ದ.
1908 ರಲ್ಲಿ ಮುಝಫ್ಫರಪುರ ಜಿಲ್ಲಾ ನ್ಯಾಯಾಧೀಶರಾಗಿದ್ದ ಕಿಂಗ್ಸ್ ಫೋರ್ಡ್ ಅವರನ್ನು ಹತ್ಯೆಗೈಯಲು ಬೋಸ್ ಹಾಗೂ ಪ್ರಪುಲ್ಲಾ ಚಕಿ ನಿಯುಕ್ತಿಗೊಂಡಿದ್ದರು.ಈ ಹಿಂದೆ ಕೊಲ್ಕತ್ತಾ ಪ್ರೆಸಿಡೆನ್ಸಿಯ ಮುಖ್ಯ ಮ್ಯಾಜಿಸ್ಟ್ರೇಟನಾಗಿದ್ದ ಆತ, ಯುವ ರಾಜಕೀಯ ಕಾರ್ಯಕರ್ತರಿಗೆ ಹಿಂಸಾತ್ಮಕ ಹಾಗೂ ಕಠಿಣ ಶಿಕ್ಷೆ ನೀಡಿ ಜನರ ಆಕ್ರೋಶವೆದುರಿಸಿದ್ದ. ಆತ ಮುಝಫ್ಫರಪುರಕ್ಕೆ ವರ್ಗಾವಣೆಗೊಂಡಾಗ ಆತನನ್ನು ಮುಗಿಸಲುಬೋಸ್ ಹಾಗೂ ಪ್ರಪುಲ್ಲಾ ಸಂಚು ಹೂಡಿದ್ದರು. ಮುಝಫ್ಫರಪುರದಲ್ಲಿ ಕೆಲವು ದಿನಗಳ ಕಾಲ ಖುದಿರಾಮ್, ಕಿಂಗ್ಸ್ ಫೋರ್ಡ್ ನ ಚಲನವಲನಗಳನ್ನು ಗಮನಿಸಿ ಕೊನೆಗೆ ಎಪ್ರಿಲ್ 30, 1908 ರಲ್ಲಿಯುರೋಪಿಯನ್ ಕ್ಲಬ್ ಹೊರಗೆ ಕಿಂಗ್ಸ್ ಫೋರ್ಡ್ ಪ್ರಯಾಣಿಸುತ್ತಿದ್ದನೆನ್ನಲಾದ ಕುದುರೆಗಾಡಿಯ ಮೇಲೆ ಬಾಂಬ್ ಒಂದನ್ನು ಎಸೆದು ಬಿಟ್ಟಿದ್ದ. ಆದರೆ ಕಿಂಗ್ಸ್ ಫೋರ್ಡ್ ಆ ವಾಹನದಲ್ಲಿರಲಿಲ್ಲ. ಬದಲಾಗಿಮುಝಫ್ಫರಪುರ ವಕೀಲರ ಸಂಘದ ವಕೀಲ ಪ್ರಿಂಗಲ್ ಕೆನ್ನಡಿಯವರ ಪತ್ನಿ ಹಾಗೂ ಪುತ್ರಿ ಅದರಲ್ಲಿ ಪ್ರಯಾಣಿಸುತ್ತಿದ್ದರು.
ಈ ಘಟನೆ ಪರಿಸರದಲ್ಲಿ ಭಾರೀ ಆತಂಕ ಸೃಷ್ಟಿಸಿತ್ತಲ್ಲದೆ, ದಾಳಿಕೋರನನ್ನು ಸೆರೆ ಹಿಡಿಯಲು ವಿಶೇಷ ಪೊಲೀಸ್ ಪಡೆಯನ್ನು ನೇಮಿಸಲಾಯಿತು. ಆತನನ್ನು ಪತ್ತೆ ಹಚ್ಚಿದವರಿಗೆ ರೂ.1000 ನಗದು ಬಹುಮಾನವನ್ನೂ ಘೋಷಿಸಲಾಗಿತ್ತು.
ತಪ್ಪಿಸಿಕೊಳ್ಳುವ ಸಲುವಾಗಿ ರಾತ್ರಿಯಿಡೀ ಸುಮಾರು 25 ಮೈಲಿ ದೂರ ನಡೆದುಕೊಂಡೇ ಸಾಗಿದ ಖುದಿರಾಮ್, ವೈನಿ ಎಂಬಲ್ಲಿನ ರೈಲ್ವೆ ನಿಲ್ದಾಣದ ಸಮೀಪ ಬಂದಿದ್ದರೂ ಅಲ್ಲಿ ಆತನನ್ನು ಬಂಧಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ವೇಳೆ ಈ ದಾಳಿಯ ಸಂಚುಕೋರರಲ್ಲಿ ಯಾರ್ಯಾರಿದ್ದರು ಎಂದು ಪ್ರಶ್ನಿಸಿದಾಗ ಖುದಿರಾಮ್ ತಾನೊಬ್ಬನೇ ಕಾರಣನೆಂದು ಹೇಳಿ ಇತರರನ್ನು ಕಾಪಾಡಿದ್ದನು. ಆತನ ಸಹವರ್ತಿ ಪ್ರಪುಲ್ಲಾ ಚಕಿ ಈ ದಾಳಿಯ ನಂತರ ಆತನಿಂದ ದೂರವಾಗಿದ್ದನೆಂದು ತಿಳಿದು ಬರುತ್ತದೆ. ಪೊಲೀಸರು ಆತನನ್ನು ಪತ್ತೆ ಹಚ್ಚಿದ್ದರೂ ಆತ ತನಗೆ ತಾನೇ ಗುಂಡಿಕ್ಕಿಕೊಂಡು ಪ್ರಾಣ ತ್ಯಾಗ ಮಾಡಿದ್ದನು. ಆದರೆ ವಿಚಾರಣೆ ವೇಳೆಗೆ ಈ ವಿಚಾರ ಖುದಿರಾಮ್ ಗೆ ತಿಳಿದಿರಲಿಲ್ಲ.
ಆತನನ್ನು ಆಗಸ್ಟ್ 11, 1908 ರಲ್ಲಿ ನೇಣಿಗೇರಿಸಲಾಯಿತು. ಆತ ಹೇಗೆ ಸಾಯುವ ಕ್ಷಣದಲ್ಲೂ ಹಸನ್ಮುಖಿಯಾಗಿದ್ದ ಎಂಬುದನ್ನು ಆನಂದ್ ಬಝಾರ್ ಪತ್ರಿಕೆ ತನ್ನ ಮರುದಿನದ ಪತ್ರಿಕೆಯಲ್ಲಿ ವಿವರಿಸಿತ್ತು.
ಹೀಗೆ 18 ವರ್ಷದಲ್ಲೇ ಇಹಲೋಕದ ಯಾತ್ರೆಯನ್ನು ಮುಗಿಸಿದ ಈ ಕ್ರಾಂತಿಕಾರಿ ಯುವಕನ ಸ್ಮರಣಾರ್ಥ ಖ್ಯಾತ ಕವಿ ಪೀತಾಂಬರ್ ದಾಸ್ ಅವರು ಮನೋಜ್ಞವಾದ ಬಂಗಾಳಿ ಕವಿತೆ ‘ಏಕ್ ಬಾರ್ ಬಿದಾಯಿ ದೇ ಮಾ’ ರಚಿಸಿದ್ದರು.







