ಮಹಾದಾಯಿ ವಿವಾದ ಬಗೆಹರಿಸುವಲ್ಲಿ ಕೇಂದ್ರ, ರಾಜ್ಯ ಸರಕಾರಗಳೆರಡೂ ವಿಫಲ: ಜನಾರ್ದನ ಪೂಜಾರಿ

ಮಂಗಳೂರು, ಆ.13: ಮಹಾದಾಯಿ ಯೋಜನೆ ವಿಚಾರದಲ್ಲಿ ಉದ್ಭವಿಸಿರುವ ಸಮಸ್ಯೆಯನ್ನು ಬಗೆಹರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ಸಂಪೂರ್ಣ ವಿಫಲವಾಗಿವೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಮಹಾದಾಯಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿವೆ. ಈ ವಿವಾದವನ್ನು ಬಗೆಹರಿಸುವುದು ಪ್ರಧಾನಿ ಮೋದಿಯವರಿಗೆ ಒಂದು ನಿಮಿಷದ ಕೆಲಸ. ಆದರೂ ಮೋದಿ ಈ ಕಾರ್ಯ ಮಾಡುತ್ತಿಲ್ಲ. ಕೂಡಲೇ ಮೋದಿಯವರು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಪರಿಹಾರ ಮಾಡಬೇಕು ಎಂದು ಆಗ್ರಹಿಸಿದರು.
ಯೋಜನೆ ಬಗೆಹರಿಸಲು ಒತ್ತಾಯಿಸಿ ರಾಜ್ಯದ ಎಲ್ಲಾ ಸಂಸದರು ರಾಜೀನಾಮೆ ನೀಡಲಿ. ಯೋಜನೆ ವಿಚಾರದಲ್ಲಿ ರೈತರನ್ನು ಬಂಧಿಸಿರುವುದು ಸರಿಯಲ್ಲ. ಅವರ ಕುಟಂಬದ ಕಣ್ಣೀರಿನ ಶಾಪ ತಟ್ಟದೇ ಇರುವುದಿಲ್ಲ. ಮುಖ್ಯಮಂತ್ರಿ ತಮ್ಮ ಜನ್ಮದಿನ ಆಚರಿಸದೇ ಇರುವುದೇ ಸಾಧನೆಯಲ್ಲ. ನಾನು ಈವರೆಗೆ ಜನ್ಮದಿನಾಚರಣೆ ಮಾಡಿಲ್ಲ ಎಂದು ಜನಾರ್ದನ ಪೂಜಾರಿ ಹೇಳಿದರು.





