ಅಶ್ಲೀಲ ಮೆಸೇಜ್ ಕಳಿಸಿದವನಿಗೆ ಸೂಕ್ತ ಪಾಠ ಕಲಿಸಿದ ರಾಷ್ಟ್ರಪತಿ ಪುತ್ರಿ
ಹೊಸದಿಲ್ಲಿ,ಆ.13: ಕಾಂಗ್ರೆಸ್ ನಾಯಕಿ ಹಾಗೂ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು ಚಾಟಿಂಗ್ ವೇಳೆ ತನಗೆ ಲೈಂಗಿಕ ಕಿರುಕುಳ ನೀಡಿರುವುದನ್ನು ಫೇಸ್ಬುಕ್ನಲ್ಲಿ ಬಹಿರಂಗಗೊಳಿಸಿದ್ದಾರೆ.
ಪಾರ್ಥಾ ಮಂಡಲ್ ಎಂಬಾತ ಫೇಸಬುಕ್ ಚಾಟ್ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆಂದು ಶರ್ಮಿಷ್ಠಾ ತನ್ನ ಫೇಸಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸುಮ್ಮನೆ ಖಾತೆಗೆ ಪ್ರವೇಶವನ್ನು ನಿರ್ಬಂಧಿಸುವ ಬದಲು ಇತರರು ಇಂತಹ ಲೈಂಗಿಕ ಕಿರುಕುಳಕ್ಕೆ ಗುರಿಯಾಗುವುದನ್ನು ತಪ್ಪಿಸಲು ಮಂಡಲ್ನಂತಹವರನ್ನು ಬಯಲುಗೊಳಿಸಲು ತಾನು ಬಯಸಿದ್ದಾಗಿ ಅವರು ಹೇಳಿದ್ದಾರೆ.
ಪಾರ್ಥಾನಂತಹ ವಿಕೃತ ಕಾಮಿಗಳನ್ನು ಬಹಿರಂಗವಾಗಿ ಬೆತ್ತಲೆಗೊಳಿಸಬೇಕು ಮತ್ತು ಅವಮಾನಿಸಬೇಕು ಎನ್ನುವುದು ನನ್ನ ಬಲವಾದ ಅಭಿಪ್ರಾಯ ಎಂದಿರುವ ಶರ್ಮಿಷ್ಠಾ, ಆತನ ಪ್ರೊಫೈಲ್ ಮತ್ತು ಆತ ತನಗೆ ರವಾನಿಸಿದ್ದ ಅಶ್ಲೀಲ ಸಂದೇಶಗಳ ಸ್ಕ್ರೀನ್ ಶಾಟ್ಗಳನ್ನು ತನ್ನ ಫೇಸ್ಬುಕ್ ಖಾತೆಗೆ ಪೋಸ್ಟ್ ಮಾಡಿದ್ದಾರೆ. ಇವುಗಳನ್ನು ಶೇರ್ ಮಾಡಿಕೊಳ್ಳುವಂತೆ ಅವರು ಫೇಸ್ಬುಕ್ಕಿಗರನ್ನು ಕೋರಿದ್ದಾರೆ.
ಕಳೆದ ತಿಂಗಳು ಜಾದವಪುರ ವಿವಿ ವಿದ್ಯಾರ್ಥಿಯಿಂದ ಲೈಂಗಿಕ ಕಿರುಕುಳವಾಗುತ್ತಿರುವ ಬಗ್ಗೆ 13 ಯುವತಿಯರು ಫೇಸ್ಬುಕ್ನಲ್ಲಿ ಬಹಿರಂಗಗೊಳಿಸಿದ್ದರು.
ಜಾದವಪುರ ವಿವಿಯ ಇಂಗ್ಲೀಷ್ ವಿಭಾಗದ ಪ್ರೊಫೆಸರ್ ಚಂದ್ರಾಯೀ ನಿಯೋಗಿಯವರ ಪುತ್ರ ಏಕಲವ್ಯ ಚೌಧುರಿಯ ವಿರುದ್ಧ ಆರೋಪಿಸಿ ಈ ಯುವತಿಯರು ಫೇಸ್ಬುಕ್ನಲ್ಲಿ ಜಂಟಿ ಹೇಳಿಕೆಯನ್ನು ನೀಡಿದ್ದರು. ಅದೇ ವಿವಿಯಲ್ಲಿ ವಿದ್ಯಾರ್ಥಿಯಾಗಿರುವ ಚೌಧುರಿ ಅವರಿಗೆ ದೈಹಿಕವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದನಲ್ಲದೆ,ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಕೆಲವು ಯುವತಿಯರು ಆತನೊಂದಿಗಿನ ಆನ್ಲೈನ್ ಚಾಟ್ನ ಸ್ಕ್ರೀನ್ ಶಾಟ್ಗಳನ್ನೂ ಹಂಚಿಕೊಂಡಿದ್ದರು.