‘ಕಾಯಿಲೆಯಿಂದ ದೂರವಿರಬೇಕಿದ್ದರೆ ಜೇನುತುಪ್ಪ ಬಳಸಿ’

ಪುತ್ತೂರು, ಆ.13: ವಿಭಿನ್ನ ಕಾಯಿಲೆಗಳಿಂದ ದೂರವಿರಲು ಬಯಸುವವರು ನಿರಂತರ ಜೇನುತುಪ್ಪವನ್ನು ಬಳಸಿಕೊಳ್ಳಿ ಎಂದು ಜೇನು ಬೆಳೆಗಾರ ಕುಮಾರ್ ಪೆರ್ನಾಜೆ ಹೇಳಿದ್ದಾರೆ.
ಅವರು ಶನಿವಾರ ಪುತ್ತೂರು ತಾಲೂಕಿನ ಕುಂಡಿಕಾನ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಲಾದ ‘ಪರಿಸರ ಸಂರಕ್ಷಣೆ’ ಮಾಹಿತಿ ಕಾರ್ಯಾಗಾರದಲ್ಲಿ ಜೇನು ಕೃಷಿಯ ಕುರಿತು ಮಾಹಿತಿ ನೀಡಿದರು.
ಜೇನು ನೊಣಗಳ ಪರಾಗಸ್ಪರ್ಶ ಪ್ರಕ್ರಿಯೆಗಳಿಂದ ಬೆಳೆಗಳ ಅಭಿವೃದ್ಧಿಯಾಗಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಜೇನು ಬಳಕೆಯಿಂದ ಬೇರೆ ಬೇರೆ ಕಾಯಿಲೆಗಳಿಂದ ದೂರವಿರಬಹುದು ಎಂದರು.
ಶಾಲಾ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸುಬ್ರಾಯ ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಜಲಜಾ, ಎಸ್‌ಕೆಡಿಆರ್‌ಡಿಪಿ ಒಕ್ಕೂಟದ ಅಧ್ಯಕ್ಷ ನಾರಾಯಣ ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ರಮ್ಯಾ ಸ್ವಾಗತಿಸಿದರು. ಸಹಶಿಕ್ಷಕ ತಿಮ್ಮಪ್ಪ ಆರ್.ಎಸ್. ವಂದಿಸಿದರು. ರೂಪಾ ಜೆ. ರೈ ಕಾರ್ಯಕ್ರಮ ನಿರೂಪಿಸಿದರು.







