ಬಿಹಾರದಲ್ಲಿ ಮದ್ಯ ಹೊಂದಿದ್ದ ಯೋಧರ ಸೆರೆ: ಕೆರಳಿದ ಸೇನೆ

ಪಾಟ್ನಾ,ಆ.13: ಮದ್ಯ ಹೊಂದಿದ್ದ ಆರೋಪದಲ್ಲಿ ಬಿಹಾರದಲ್ಲಿ ಹಲವಾರು ಯೋಧರ ಬಂಧನವು ಭಾರೀ ವಿವಾದ ಸೃಷ್ಟಿಸುವ ಸಾಧ್ಯತೆಯಿದೆ. ಈ ಬಂಧನಗಳು ಅಕ್ರಮವೆಂದು ಹಿರಿಯ ಸೇನಾಧಿಕಾರಿಗಳು ಪ್ರತಿಪಾದಿಸಿದ್ದಾರೆ.
ರಾಜ್ಯ ಸರಕಾರದ ಪಾನನಿಷೇಧ ನೀತಿಯಡಿ ಇತ್ತೀಚಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕ್ಯಾಪ್ಟನ್ ಮತ್ತು ಇತರ ಸೇನಾ ಸಿಬ್ಬಂದಿಗಳನ್ನು ಬಂಧಿಸಿರುವುದು ಗಂಭೀರ ವಿಷಯವಾಗಿದೆ. ಕೊಲೆ,ಕೊಲೆಗೆ ಸಮವಲ್ಲದ ನರಹತ್ಯೆ ಮತ್ತು ಅತ್ಯಾಚಾರ ಅಪರಾಧಗಳನ್ನು ಹೊರತುಪಡಿಸಿ ಸಿವಿಲ್ ನ್ಯಾಯಾಲಯಗಳು ಯೋಧರನ್ನು ವಿಚಾರಣೆಗೊಳಪಡಿಸುವಂತಿಲ್ಲ ಎಂದು ಹೇಳಿದ ಹಿರಿಯ ಸೇನಾಧಿಕಾರಿಯೋರ್ವರು, ಇತರ ಅಪರಾಧಗಳ ವಿಚಾರಣೆಗಾಗಿ ಸೇನೆಯ ಅಧಿಕಾರ ವ್ಯಾಪ್ತಿಯನ್ನು ಸರಕಾರವು ತನ್ನ 1978 ಫೆ.9ರ ಆದೇಶದಲ್ಲಿ ನಿಗದಿಗೊಳಿಸಿದೆ. ಹೆಚ್ಚಿನ ಮಿಲಿಟರಿ ಅಧಿಕಾರಿಗಳಿಗೆ ಇದರ ಪೂರ್ಣ ಅರಿವು ಇಲ್ಲ ಎಂದರು.
ಈ ಮೂರು ನಿರ್ದಿಷ್ಟ ಅಪರಾಧಗಳನ್ನು ಹೊರತುಪಡಿಸಿ ಇತರೆಲ್ಲ ಪ್ರಕರಣಗಳಿಗೂ ಕೋರ್ಟ್ ಮಾರ್ಷಲ್ ಸೂಕ್ತ ಮಾರ್ಗವಾಗಿದೆ. ಸಂಬಂಧಿತ ದಂಡಾಧಿಕಾರಿಗಳು ಆರೋಪಿಗಳನ್ನು ವಿಚಾರಣೆಗಾಗಿ ತಕ್ಷಣ ಸೇನೆಗೆ ಹಸ್ತಾಂತರಿಸಬೇಕು ಎಂದು ಅವರು ತಿಳಿಸಿದರು
ಸಶಸ್ತ್ರ ಪಡೆಗಳು ತಮ್ಮದೇ ಆದ ನಿಯಮಗಳನ್ನು ಹೊಂದಿದ್ದು, ಕೇಂದ್ರ ಸರಕಾರದ ಅನುಮತಿಯಿಲ್ಲದೆ ಸೇನಾ ಸಿಬ್ಬಂದಿಗಳನ್ನು ಪೊಲೀಸರು ಬಂಧಿಸುವಂತಿಲ್ಲ ಎಂದು ಇನ್ನೋರ್ವ ಅಧಿಕಾರಿ ಹೇಳಿದರು.
ಸೇನಾ ಸಿಬ್ಬಂದಿಗಳು ಸೇನೆಯ ಅಧಿಕೃತ ಪರವಾನಿಗೆ ಸಹಿತ ಮದ್ಯವನ್ನು ಹೊಂದಿರುತ್ತಾರೆ ಮತ್ತು ರೈಲುಗಳಲ್ಲಿ ಮದ್ಯದೊಂದಿಗೆ ಪ್ರಯಾಣಿಸುವುದು ರೈಲ್ವೆ ರಕ್ಷಣಾ ಪಡೆ(ಆರ್‌ಪಿಎಫ್) ಕಾಯ್ದೆಯನ್ವಯ ಅಕ್ರಮವಲ್ಲ. ಅಲ್ಲದೆ ಬಿಹಾರದ ಹಾಲಿ ಅಬಕಾರಿ ಕಾಯ್ದೆಯಂತೆ ಮದ್ಯವನ್ನು ಹೊಂದಿರುವುದು ಅಪರಾಧವಲ್ಲ ಎಂದು ಪಾಟ್ನಾ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ. ಹೀಗಾಗಿ ಈ ಎಲ್ಲ ಬಂಧನಗಳು ಅಕ್ರಮವಾಗಿವೆ ಮತ್ತು ಹೊಸ ಕಟ್ಟುನಿಟ್ಟಾದ ಕಾನೂನು ಜಾರಿಗೆ ಬರುವವರೆಗೆ ಅಕ್ರಮವಾಗಿರುತ್ತವೆ ಎಂದು ಅವರು ಹೇಳಿದರು.
ದಂಡು ಪ್ರದೇಶಗಳಲ್ಲಿ ಬಿಹಾರ ಅಬಕಾರಿ ಕಾಯ್ದೆಯು ಹಸ್ತಕ್ಷೇಪ ಮಾಡುವುದಿಲ್ಲವಾದರೂ,ಪ್ರದೇಶದ ಹೊರಗೆ ಸೇನಾ ಸಿಬ್ಬಂದಿಗಳು ಮದ್ಯಪಾನ ಮಾಡುತ್ತಿರುವುದು ಅಥವಾ ಮದ್ಯ ಹೊಂದಿರುವುದು ಪತ್ತೆಯಾದರೆ ಕ್ರಮವನ್ನು ಜರುಗಿಸಲಾಗುತ್ತದೆ ಎಂದು ಅಬಕಾರಿ ಅಯುಕ್ತರು ಬಿಹಾರ ಮತ್ತು ಜಾರ್ಖಂಡ್‌ಗಳಲ್ಲಿಯ ಹಿರಿಯ ಸೇನಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಯಾಣ ಸಂದರ್ಭದಲ್ಲಿ ಹಲವಾರು ಯೋಧರು ಬಂಧನಕ್ಕೊಳಗಾಗುತ್ತಿದ್ದಾರೆ.
ಬಿಹಾರ ರೆಜಿಮೆಂಟ್‌ನ 20,000ಕ್ಕೂ ಅಧಿಕ ಯೋಧರು ಜಮ್ಮು-ಕಾಶ್ಮೀರ ಸೇರಿದಂತೆ ದೂರದ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ದಿಢೀರ್ ಆಗಿ ಬೇರೆ ಕಡೆ ತೆರಳುವ ಅಥವಾ ರಜೆಯಲ್ಲಿ ಹೋಗುವ ಸಂದರ್ಭಗಳಲ್ಲಿ ಅವರು ಮದ್ಯದೊಂದಿಗೆ ಬಿಹಾರವನ್ನು ಪ್ರವೇಶಿಸುತ್ತಾರೆ ಎಂದು ಹಿರಿಯ ಸೇನಾಧಿಕಾರಿ ತಿಳಿಸಿದರು.





