ನಿರಂತರ ಅಧ್ಯಯನದಿಂದ ಸಾಧನೆ ಮಾಡಲು ಸಾಧ್ಯ: ಘನಶ್ಯಾಮ್ ದಾಸ್
ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ

ಮಂಗಳೂರು, ಆ.13: ಅಡ್ಯಾರ್‌ನ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೆಜ್‌ಮೆಂಟ್ ಕಾಲೇಜಿನಲ್ಲಿ ಎಂಬಿಎ, ಎಂಸಿಎ, ಎಂಟೆಕ್‌ನ 182 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಪ್ರದವಿ ಪ್ರದಾನ ನೆರವೇರಿಸಿ ಮಾತನಾಡಿದ ಕೆಪಿಎಂಜಿಯ ಹಿರಿಯ ಸಲಹೆಗಾರ ಘನಶ್ಯಾಮ್ ದಾಸ್, ಕಲಿಕೆಯೆಂಬುದು ನಿರಂತರವಾಗಿ ಇರಬೇಕು. ಯಾವ ಕೆಲಸದಲ್ಲೇ ಇದ್ದರೂ ನಿರಂತರವಾಗಿ ಅಧ್ಯಯನ ಮಾಡುತ್ತಿದ್ದರೆ ಸಾಧನೆ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೆಜ್‌ಮೆಂಟ್ ಕಾಲೇಜಿನ ಅಧ್ಯಕ್ಷ ಮಂಜುನಾಥ ಭಂಡಾರಿ, ಪ್ರತಿಯೊಂದು ಕಾಲೇಜು ಯಶಸ್ಸು ಗಳಿಸುವುದು ಮತ್ತು ವೈಫಲ್ಯ ಹೊಂದುವುದು ವಿದ್ಯಾರ್ಥಿಗಳಿಂದ. ಸಹ್ಯಾದ್ರಿ ಕಾಲೇಜಿನಲ್ಲಿ ಹಿಂದೆ ಅಧ್ಯಯನ ಮಾಡಿದ ವಿದ್ಯಾರ್ಥಿಗಳ ಸಾಧನೆಯಿಂದ ಕಾಲೇಜಿಗೆ ಉತ್ತಮ ಹೆಸರು ಬಂದಿದೆ. ಅದೇ ರೀತಿ ಪದವಿ ಪಡೆದ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುವ ಸಂಸ್ಥೆಗಳಲ್ಲಿ ದೀರ್ಘಾವಧಿ ಇದ್ದು ಅನುಭವವನ್ನು ಪಡೆಯಬೇಕು ಎಂದು ಹೇಳಿದರು.
ಪದವಿ ಪ್ರಮಾಣ ಪತ್ರ ಪಡೆದುಕೊಂಡ ವಿದ್ಯಾರ್ಥಿನಿಯರಾದ ಮರ್ಝಿನಾ ನತಾಶಾ ಮತ್ತು ಲೊಲಿಟಾ ಡಿಸೋಜ ಕಾಲೇಜಿನ ಅನುಭವಗಳನ್ನು ಹಂಚಿಕೊಂಡರು.
ವಿಟಿಯುವಿನಲ್ಲಿ ರ್ಯಾಂಕ್ ಪಡೆದುಕೊಂಡ ಪ್ರಜ್ಞಾರನ್ನು ಇದೇ ವೇಳೆ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಉಮೇಶ್ ಭೂಷಿ, ಡಿಪಾರ್ಟ್‌ಮೆಂಟ್ ಆಫ್ ಬಿಸಿನೆಸ್‌ನ ಡೈರೆಕ್ಟರ್ ಡಾ.ವಿಶಾಲ್ ಸಮರ್ಥ, ಎಂಸಿಎ ಡಿಪಾರ್ಟ್ ಮೆಂಟ್‌ನ ಎಚ್‌ಒಡಿ ಪ್ರೊ.ಗೋರ್ಬಲ್, ಡೀನ್ ಉಮಾಶಂಕರ್ ಮತ್ತಿತರರು ಉಪಸ್ಥಿತರಿದ್ದರು.







