ಗೋ ಮಾಂಸ ರಫ್ತು ನಿಷೇಧಕ್ಕೆ ಒತ್ತಾಯಿಸಿ ಸಮಾವೇಶ: ರೋಷನ್‌ಬೇಗ್
ಕ್ರೈಸ್ತ ಬಾಂಧವರಿಂದ ‘ಸ್ನೇಹ ಮಿಲನ’ ಸೌಹಾರ್ದಕೂಟ

ಬೆಂಗಳೂರು, ಆ.13: ಭಾರತದಿಂದ ಗೋ ಮಾಂಸವನ್ನು ವಿದೇಶಗಳಿಗೆ ರಫ್ತು ಮಾಡುವುದನ್ನು ನಿಷೇಧಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಸಮಾವೇಶವನ್ನು ನಡೆಸಲಾಗುವುದು ಎಂದು ನಗರಾಭಿವೃದ್ಧಿ ಹಾಗೂ ಹಜ್ ಸಚಿವ ಆರ್.ರೋಷನ್‌ಬೇಗ್ ತಿಳಿಸಿದ್ದಾರೆ.
ಶನಿವಾರ ನಗರದ ಅರಮನೆ ಮೈದಾನದಲ್ಲಿ ಕ್ರೈಸ್ತ ಬಾಂಧವರು ಆಯೋಜಿಸಿದ್ದ ‘ಸ್ನೇಹ ಮಿಲನ-2016’ ಸೌಹಾರ್ದಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋಮಾಂಸ ರಫ್ತು ಮಾಡುವುದರಲ್ಲಿ ಪ್ರಥಮ ಸ್ಥಾನದಲ್ಲಿ ಬಹುಸಂಖ್ಯಾತ ಸಮುದಾಯಕ್ಕೆ ಸೇರಿದವರಿದ್ದಾರೆ. ಆದರೂ, ಆಪಾದನೆ ಮಾತ್ರ ಮುಸ್ಲಿಮರು ಹಾಗೂ ಕ್ರೈಸ್ತರ ಮೇಲೆ ಬರುತ್ತದೆ ಎಂದರು.
ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮುಸ್ಲಿಮರು, ಕ್ರೈಸ್ತರು, ಜೈನರು, ಸಿಖ್ಖರು ಹಾಗೂ ಪಾರ್ಸಿಗಳನ್ನು ಸೇರಿಸಿಕೊಂಡು ‘ಗೋ ಮಾಂಸ ರಫ್ತು’ ನಿಷೇಧಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಶೀಘ್ರವೆ ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರಮೋದಿ ಭಾರತದಲ್ಲಿ ಇರುವುದೇ ಅಪರೂಪ. ಸದಾ ಕಾಲ ವಿದೇಶಗಳನ್ನು ಸುತ್ತುತ್ತಿರುತ್ತಾರೆ. ಆದುದರಿಂದ, ಅವರಿಗೆ ದೇಶದ ವಾಸ್ತವ ಪರಿಸ್ಥಿತಿ ಅರ್ಥವಾಗುತ್ತಿಲ್ಲ. ಕೈಹಿಡಿದ ಪತ್ನಿಯನ್ನು ಗುಜರಾತ್‌ನ ಯಾವುದೋ ಒಂದು ಭಾಗದಲ್ಲಿ ಬಿಟ್ಟು ಬಂದಿದ್ದಾರೆ. ಅವರ ಬಗ್ಗೆಯಾದರೂ ಕಾಳಜಿವಹಿಸಲಿ ಎಂದು ರೋಷನ್‌ಬೇಗ್ ವ್ಯಂಗ್ಯವಾಡಿದರು.
ಕಳೆದ ಒಂದು ತಿಂಗಳಿನಿಂದ ದಲಿತರ ಮೇಲಿನ ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ, ಈ ಬಗ್ಗೆ ಚಕಾರವೆತ್ತದೆ ಸುಮ್ಮನಿದ್ದ ನರೇಂದ್ರಮೋದಿ, ಮುಂಬರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುವ ಭಯದಿಂದ ದಲಿತರ ಪರವಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಅವರ ನಾಟಕವನ್ನು ಜನ ನಂಬುವುದಿಲ್ಲ ಎಂದು ಅವರು ಹೇಳಿದರು.
ದೇಶದ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಕ್ರೈಸ್ತ ಬಾಂಧವರು ನೀಡಿರುವಂತಹ ಕೊಡುಗೆ ಅಪಾರವಾದದ್ದು. ಬಜರಂಗದಳ, ವಿಶ್ವಹಿಂದುಪರಿಷತ್ ಸೇರಿದಂತೆ ಸಂಘಪರಿವಾರದ ಬಹುತೇಕ ನಾಯಕರು ಕ್ರೈಸ್ತ ಮಿಷನರಿಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲೆ ಪದವಿಯನ್ನು ಪಡೆದಿದ್ದಾರೆ. ಆದರೆ, ಈಗ ಕ್ರೈಸ್ತರ ವಿರುದ್ಧ ವಿಷ ಕಾರುತ್ತಿದ್ದಾರೆ ಎಂದು ರೋಷನ್‌ಬೇಗ್ ಕಿಡಿಗಾರಿದರು.
ವಿಧಾನಪರಿಷತ್ತಿನ ಮುಖ್ಯಸಚೇತಕ ಐವಾನ್ ಡಿ’ಸೋಜಾ ಮಾತನಾಡಿ, ದೇಶದ ಅಭಿವೃದ್ಧಿಗೆ ಎಲ್ಲ ಸಮುದಾಯಗಳು ಒಗ್ಗಟ್ಟಾಗಿ ಮುಂದುವರೆಯಬೇಕು. ಕ್ರೈಸ್ತ ಸಮುದಾಯವು ಜನಸಂಖ್ಯೆಯಲ್ಲಿ ಶೇ.3ರಷ್ಟು ಇದ್ದರೂ ಇಡೀ ದೇಶದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಸಮಾಜ ಕಟ್ಟುವಂತಹ ಕೆಲಸದಲ್ಲಿ ಇತರರಿಗೆ ಮಾದರಿಯಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ 125 ಕೋಟಿ ರೂ.ಗಳನ್ನು ಒದಗಿಸಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅರಿವು ಯೋಜನೆ, ಸಿಇಟಿ ಮೂಲಕ ಶುಲ್ಕ ಪಾವತಿ, ವಿದ್ಯಾರ್ಥಿವೇತನ, ಚರ್ಚ್‌ಗಳ ಅಭಿವೃದ್ಧಿಗೆ ನೆರವು ನೀಡಿದ್ದಾರೆ. ಯಾವ ಸರಕಾರ ಕ್ರೈಸ್ತರ ಪರವಾಗಿರುತ್ತದೋ ಅಂತಹ ಸರಕಾರಕ್ಕೆ ಬೆಂಬಲ ನೀಡುವುದು ನಮ್ಮ ಕರ್ತವ್ಯವಾಗಬೇಕು ಎಂದು ಐವಾನ್ ಡಿ’ಸೋಜಾ ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ, ಎಐಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅನಿಲ್ ಥಾಮಸ್, ಶಾಸಕಿ ವಿನಿಶಾ ನಿರೋ, ವಿಧಾನಪರಿಷತ್ ಸದಸ್ಯ ರಿಝ್ವಾನ್ ಅರ್ಶದ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷೆ ಬಲ್ಕೀಸ್‌ಬಾನು, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ವೈ.ಸಯೀದ್‌ಅಹ್ಮದ್, ಮಾಜಿ ಶಾಸಕ ಐವಾನ್ ನಿಗ್ಲಿ, ಮೆಟಿಲ್ಡಾ, ಡಾ.ಸೀಮಾ ಫರ್ನಾಂಡಿಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





