ತಿಂಗಳೊಳಗೆ ಅಲ್ಪಸಂಖ್ಯಾತ ಭವನ ಪೂರ್ಣ: ಲೋಬೊ ವಿಶ್ವಾಸ

ಮಂಗಳೂರು, ಆ. 13: ನಗರದ ಪಾಂಡೇಶ್ವರದ ಓಲ್ಡ್ ಕೆಂಟ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಅಲ್ಪಸಂಖ್ಯಾತರ ಭವನ ಕಾಮಗಾರಿಯು ಮುಂದಿನ ಒಂದು ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಶಾಸಕ ಜೆ.ಆರ್.ಲೋಬೊ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದ.ಕ. ಜಿಲ್ಲೆಯ ಜನರ ಬಹು ನಿರೀಕ್ಷಿತ ಅಲ್ಪಸಂಖ್ಯಾತರ ಭವನ ನಿರ್ಮಾಣ ಸ್ಥಳಕ್ಕೆ ಇಂದು ಸಂಜೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಇಲಾಖೆಗಳು ಒಂದೇ ಸಂಕೀರ್ಣದಡಿ ಕಾರ್ಯಾಚರಿಸಬೇಕೆಂಬ ಅಗತ್ಯವನ್ನು ಮನಗಂಡು ಈ ಕಟ್ಟಡದ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಂಕೀರ್ಣಕ್ಕೆ ಈಗಾಗಲೇ 2 ಕೋಟಿ ರೂ.ವನ್ನು ಮಂಜೂರು ಮಾಡಿಸಿದ್ದು, ಕಟ್ಟಡಕ್ಕೆ ಲಿಫ್ಟ್, ಜನರೇಟರ್ ಮತ್ತಿತರ ಕೆಲಸಗಳು ಆಗಬೇಕಾಗಿರುವುದರಿಂದ ಇನ್ನೂ 50 ಲಕ್ಷ ರೂ.ಗಳ ಅನುದಾನದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಅನುದಾನದ ಬಿಡುಗಡೆಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡುವುದಾಗಿ ತಿಳಿಸಿದ ಶಾಸಕರು, ಮುಖ್ಯಮಂತ್ರಿಯವರು ಶೀಘ್ರದಲ್ಲೇ ಬಿಡುಗಡೆಗೊಳಿಸುವ ಭರವಸೆ ಇದೆ ಎಂದರು.
ಎಂಟು ತಿಂಗಳಲ್ಲಿ ಮೂರು ಅಂತಸ್ತಿನ ಕಟ್ಟಡದ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಯೋಜನೆಯಂತೆ ಮುಂದಿನ ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಂಡರೆ, ವಕ್ಫ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಇಲಾಖೆಯ ಸಚಿವ ತನ್ವೀರ್ ಸೇಠ್ ಅವರನ್ನು ಆಹ್ವಾನಿಸಿ ಉದ್ಘಾಟಿಸುವುದಾಗಿ ಶಾಸಕರು ತಿಳಿಸಿದರು. ನೂತನ ಸಂಕರ್ಣದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಸಂಬಂಧಿಸಿದ ವಿವಿಧ ಇಲಾಖೆಯ ಜೊತೆಗೆ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಅಭಿವೃದ್ಧಿ ನಿಗಮ, ಮಾಹಿತಿ ಕೇಂದ್ರ, ಹಾಗೂ ಹಜ್ ಸಂಬಂಧಿ ಮಾಹಿತಿಗಳನ್ನೊಳಗೊಂಡ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ಹೊಂದಲಾಗಿದೆ ಎಂದು ಲೋಬೊ ಮಾಹಿತಿ ನೀಡಿದರು.
ಕಾರ್ಪೊರೇಟರ್‌ಗಳಾದ ಲ್ಯಾನ್ಸಿಲಾಟ್ ಪಿಂಟೊ, ಪ್ರವೀಣ್ ಆಳ್ವ, ಸಬಿತಾ ಮಿಸ್ಕಿತ್, ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಕಾಂಗ್ರೆಸ್ ಮುಖಂಡರಾದ ಟಿ.ಕೆ.ಸುಧೀರ್, ವಿಶ್ವಾಸ್ ಕುಮಾರ್ ದಾಸ್, ಬಾಲಕೃಷ್ಣ ಶೆಟ್ಟಿ, ತೇಜಸ್ವಿರಾಜ್, ಸ್ಟಾನಿ ಆಲ್ವರಿಸ್, ಶಂಶುದ್ದೀನ್, ಅಬೂಬಕರ್, ಅಹ್ಮದ್ ಬಾವ, ಹಮೀದ್ ಕಣ್ಣೂರು, ರಫೀಕ್ ಕಣ್ಣೂರು, ಅರುಣ್ ಕೊಯಿಲೊ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹನೀಫ್‌ಹಾಜಿ ಮೊದಲಾದವರು ಉಪಸ್ಥಿತರಿದ್ದರು.
ನಡುಪಳ್ಳಿ ತಡೆಗೋಡೆಗೆ ಕೋಟಿ ರೂ.
ಕಣ್ಣೂರಿನ ಬದ್ರಿಯಾ ಜುಮಾ ಮಸೀದಿ ಅಧೀನದ ದ್ವೀಪದಲ್ಲಿರುವ 200 ವರ್ಷಗಳ ಹಿಂದಿನ ಕಣ್ಣೂರು ನಡುಪಳ್ಳಿ ಮಸೀದಿಯ ಸುತ್ತಲೂ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕರು ಲೋಬೊ ತಿಳಿಸಿದರು.
ಸುತ್ತಲೂ ನೀರಿನಿಂದ ಆವೃತಗೊಂಡಿರುವ ಇತಿಹಾಸ ಪ್ರಸಿದ್ಧ ಈ ನಡುಪಳ್ಳಿ ಮಸೀದಿಗೆ ನೀರು ನುಗ್ಗಿ ಮಸೀದಿಯ ಕೆಲವು ಭಾಗಗಳು ಹಾನಿಗೊಂಡಿವೆ. ಈ ಹಿನ್ನೆಲೆಯಲ್ಲಿ ಮಸೀದಿಯ ಸುತ್ತಲೂ ತಡೆಗೋಡೆ ನಿರ್ಮಾಣಕ್ಕೆ ಒಂದು ಕೋಟಿ ರೂ. ಪ್ರಸ್ತಾಪ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಯವರು ಅನುದಾನ ಬಿಡುಗಡೆಗೊಳಿಸುವ ಭರವಸೆ ಇದೆ ಎಂದರು.







