ಕೃಷಿ ಪದ್ಧತಿಯನ್ನು ಉಳಿಸಿ ಬೆಳೆಸಲು ಕರೆ
ಸಂಭ್ರಮದ ಕೆಸರು ಗದ್ದೆ ಕ್ರೀಡೋತ್ಸವ

ಮಡಿಕೇರಿ, ಆ.13: ಕೃಷಿ ಪ್ರಧಾನ ಜಿಲ್ಲೆ ಕೊಡಗಿನಲ್ಲಿ ಭತ್ತದ ಕೃಷಿ ನೇಪಥ್ಯಕ್ಕೆ ಸರಿಯುತ್ತಿರುವ ಬೆನ್ನಲ್ಲೇ ಭತ್ತದ ಫಸಲಿಲ್ಲದ ಗದ್ದೆಗಳು ಇಂದು ಕೆಸರು ಗದ್ದೆ ಕ್ರೀಡಾಕೂಟಕ್ಕೆ ಸೀಮಿತವಾಗುತ್ತಿವೆ. ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಭತ್ತದ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜಿಲ್ಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಕ್ರೀಡಾಕೂಟವನ್ನು ನಡೆಸಿಕೊಂಡು ಬರುತ್ತಿವೆ. ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಹಾಗೂ ಗೋಪಾಲ ಕೃಷ್ಣ ಯುವಕ ಸಂಘ ಮತ್ತು ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಅವಂದೂರು ಗ್ರಾಮದ ಕಾಳೇರಮ್ಮನ ಅಯ್ಯಣ್ಣನವರ ಗದ್ದೆಯಲ್ಲಿ ಕೆಸರು ಗದ್ದೆ ಕ್ರೀಡೋತ್ಸವವನ್ನು ಮದೆ ಗ್ರಾಪಂ ಅಧ್ಯಕ್ಷ ಮುದ್ಯನ ಚಂದ್ರಶೇಖರ್ ಉದ್ಘಾಟಿಸಿದರು, ಅಕಾಡಮಿಯ ಅಧ್ಯಕ್ಷ ಕೊಲ್ಯದ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಕೃಷಿ ಸಂಸ್ಕೃತಿಯನ್ನು ಜೀವಂತವಾಗಿ ಉಳಿಸಬೇಕೆಂದು ಕರೆ ನೀಡಿ, ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ವಿವಿಧ ವಿಭಾಗಗಳಲ್ಲಿ ನಡೆದ ಕೆಸರು ಗದ್ದೆ ಕ್ರೀಡೋತ್ಸವ ಹೆಚ್ಚು ಆಕರ್ಷಕವಾಗಿದ್ದವು. ಸಮಾರೋಪ ಸಮಾರಂಭದಲ್ಲಿ ಕ್ರೀಡಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕೃಷಿ ಪದ್ಧ್ದತಿಯನ್ನು ಮರೆಯದಂತೆ ಗಣ್ಯರ ಕರೆ: ಕೆಸರು ಗದ್ದೆ ಕ್ರೀಡೋತ್ಸವ ಹಾಗೂ ಸಾಂಪ್ರದಾಯಿಕ ನಾಟಿ ಓಟದ ಸಭಾ ಕಾರ್ಯಕ್ರಮವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಕ್ಷೀಣಿಸುತ್ತಿರುವುದರಿಂದ ಅಂತರ್ಜಲ ಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕಂಪ್ಯೂಟರ್ ಯುಗದಲ್ಲಿ ಎಲ್ಲವೂ ಲಾಭದ ಲೆಕ್ಕಾಚಾರವಾಗಿದ್ದು, ಗದ್ದೆಯಿಂದ ಲಾಭವಿಲ್ಲ ಎನ್ನುವ ಭಾವನೆ ಬಂದಿದೆ. ಆದರೆ ಕೃಷಿಯಲ್ಲಿ ಯಾಂತ್ರೀಕತೆ ಆರಂಭಗೊಂಡಿದ್ದು, ಇದರ ಸದುಪಯೋಗಪಡಿಸಿಕೊಂಡು ಕೃಷಿಯಲ್ಲೂ ಲಾಭ ಪಡೆಯಬಹುದೆಂದು ಕೆ.ಜಿ.ಬೋಪಯ್ಯ ಸಲಹೆ ನೀಡಿದರು. ಸಾಂಪ್ರದಾಯಿಕ ನಾಟಿ ಓಟಕ್ಕೆ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಚಾಲನೆ ನೀಡಿದರು. ಸಾಂಪ್ರದಾಯಿಕ ಕೃಷಿ ಎಂಬ ವಿಷಯದಲ್ಲಿ ವಿಚಾರ ಮಂಡನೆ ಮಾಡಿದ ಉಪನ್ಯಾಸಕ ಪಟ್ಟಡ ಶಿವಕುಮಾರ್, ಸಾಂಪ್ರದಾಯಿಕ ಕೃಷಿಯಲ್ಲಿ ಸಮಾಜದ ಸಾಮರಸ್ಯವಿತ್ತು, ಗದ್ದೆ ನಮ್ಮ ತಾಯಿಯಂತೆ, ಭತ್ತದ ಬೆಳೆಯೊಂದಿಗೆ ಸಂಬಂಧವಿತ್ತು, ಇಂದು ಎಲ್ಲವೂ ಮಾಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಕಾಡಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭತ್ತದೊಂದಿಗೆ ನಮ್ಮ ಸಂಬಂಧವಿದ್ದು ಕೃಷಿಯನ್ನು ಬೆಳೆಸಿಕೊಂಡು ಹೋಗೋಣ, ಅಕಾಡಮಿ ವತಿಯಿಂದ ಕೃಷಿಗೆ ಪೂರಕವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಮುಖ್ಯ ಅತಿಥಿಗಳಾಗಿ ಮದೆ ಗ್ರಾಪಂ ಸದಸ್ಯ ಬೆಲ್ಯನ ರವಿ, ಗೋಪಾಲಕೃಷ್ಣ ಯುವ ಸಂಘದ ಅಧ್ಯಕ್ಷ ಹೊಸೂರು ಗಿರಿ, ಸಾಹಿತಿ ಬೈತಡ್ಕ ಜಾನಕಿ ಬೆಳ್ಯಪ್ಪ, ಅಕಾಡಮಿ ಸದಸ್ಯ ಮಂದ್ರಿರ ಮೋಹನ್‌ದಾಸ್ ಉಪಸ್ಥಿತರಿದ್ದರು.







